ಶಿವಸೇನೆಯನ್ನು ಉಳಿಸಿಕೊಳ್ಳಲು ಸುಪ್ರೀಂ ಮೆಟ್ಟಿಲೇರಿದ ಉದ್ಧವ್ ಠಾಕ್ರೆ
ಇನ್ನೋರ್ವ ಶಿವಸೇನೆ ನಾಯಕ ಶಿಂದೆ ಪಾಳಯಕ್ಕೆ ಸೇರ್ಪಡೆ

Photo:PTI
ಹೊಸದಿಲ್ಲಿ,ಜು.25: ಏಕನಾಥ ಶಿಂದೆ ಬಣವನ್ನು ನಿಜವಾದ ಶಿವಸೇನೆಯೆಂದು ಮಾನ್ಯ ಮಾಡುವ ಚುನಾವಣಾ ಆಯೋಗದ ಕಲಾಪಗಳಿಗೆ ತಡೆಯಾಜ್ಞೆಯನ್ನು ಕೋರಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ನೇತೃತ್ವದ ಬಣವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಲನ್ನೇರಿದೆ. ಸೋಮವಾರ ಶಿವಸೇನೆ ನಾಯಕ ಅರ್ಜುನ ಖೋತ್ಕರ್ ಶಿಂಧೆ ಪಾಳಯಕ್ಕೆ ಸೇರುವ ಮೂಲಕ ಉದ್ಧವ ಬಣಕ್ಕೆ ಇನ್ನೊಂದು ಆಘಾತದ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಬಂಡುಕೋರ ಶಾಸಕರ ಅನರ್ಹತೆ ಕುರಿತು ನಿರ್ಧಾರವಾಗುವವರೆಗೆ ಯಾವುದು ನಿಜವಾದ ಶಿವಸೇನೆ ಎನ್ನುವುದನ್ನು ಚುನಾವಣಾ ಆಯೋಗವು ನಿರ್ಧರಿಸುವಂತಿಲ್ಲ ಎಂದು ಉದ್ಧವ ಬಣವು ಹೇಳಿದೆ.
ಚುನಾವಣಾ ಆಯೋಗವು ಜು.22ರಂದು ಆರಂಭಿಸಿರುವ ಕಲಾಪಗಳು ಮುಂದುವರಿಯಲು ಅವಕಾಶ ನೀಡಿದರೆ ಅದು ಈ ನ್ಯಾಯಾಲಯದ ಮುಂದೆ ಬಾಕಿ ಇರುವ ಮಹತ್ವದ ಸಾಂವಿಧಾನಿಕ ವಿಷಯಗಳನ್ನು ಇನ್ನಷ್ಟು ಉಲ್ಬಣಗೊಳಿಸುವುದು ಮಾತ್ರವಲ್ಲ,ಶಾಸಕರಾಗಿ ತಮ್ಮ ಸ್ಥಾನಮಾನವನ್ನು ಈ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿರುವ ವ್ಯಕ್ತಿಗಳ ಅರ್ಜಿಯನ್ನು ನೆಚ್ಚಿಕೊಳ್ಳುವುದು ನ್ಯಾಯಯುತ ಮತ್ತು ಸೂಕ್ತವಲ್ಲವಾದ್ದರಿಂದ ಚುನಾವಣಾ ಆಯೋಗದ ಯಾವುದೇ ಕಲಾಪವು ಈ ಅರ್ಜಿದಾರರಿಗೆ ಸರಿಪಡಿಸಲಾಗದಷ್ಟು ಹಾನಿಯನ್ನೂ ಉಂಟು ಮಾಡುತ್ತದೆ ಎಂದು ಉದ್ಧವ ಬಣವು ತನ್ನ ಅರ್ಜಿಯಲ್ಲಿ ಹೇಳಿದೆ.
ನ್ಯಾಯಾಲಯದಲ್ಲಿ ವಿಚಾರಣಾಧೀನವಾಗಿರುವ ವಿಷಯದಲ್ಲಿ ವಿಚಾರಣೆಯು ನ್ಯಾಯಾಂಗ ಕಲಾಪದಲ್ಲಿ ಹಸ್ತಕ್ಷೇಪವಾಗುತ್ತದೆ ಮತ್ತು ನ್ಯಾಯಾಂಗ ನಿಂದನೆಗೆ ಸಮನಾಗುತ್ತದೆ ಎಂದು ಈ ಗೌರವಾನ್ವಿತ ನ್ಯಾಯಾಲಯ ಮತ್ತು ವಿವಿಧ ಉಚ್ಚ ನ್ಯಾಯಾಲಯಗಳು ತಮ್ಮ ಹಲವಾರು ತೀರ್ಪುಗಳಲ್ಲಿ ಎತ್ತಿಹಿಡಿದಿವೆ. ಹೀಗಾಗಿ ಚುನಾವಣಾ ಆಯೋಗದ ಕಲಾಪಗಳು ಈ ಸ್ಥಾಪಿತ ಕಾನೂನನ್ನು ಉಲ್ಲಂಘಿಸುತ್ತವೆ ಎಂದೂ ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಈ ನಡುವೆ ರವಿವಾರ ದಕ್ಷಿಣ ಮುಂಬೈನಲ್ಲಿ ಪಕ್ಷದ ವಾರ್ಡ್ ಮಟ್ಟದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಠಾಕ್ರೆ,ಈ ಬಾರಿಯ ಬಂಡಾಯವು ಶಿವಸೇನೆಯನ್ನು ಮುಗಿಸಲು ಉದ್ದೇಶಿಸಿದೆ. ಶಿವಸೇನೆಯು ಹಿಂದುತ್ವಕ್ಕಾಗಿ ರಾಜಕೀಯದಲ್ಲಿ ತೊಡಗಿದೆ,ಆದರೆ ಬಿಜೆಪಿಯು ತನ್ನ ರಾಜಕೀಯ ಹಿತಾಸಕ್ತಿಗಳಿಗಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.







