ನನ್ನ ಮನೆಯಲ್ಲಿ ಸಿಕ್ಕಿದ ಹಣ ಪಾರ್ಥ ಚಟರ್ಜಿಗೆ ಸೇರಿದ್ದು: ಈ.ಡಿ.ವಿಚಾರಣೆಯಲ್ಲಿ ಒಪ್ಪಿಕೊಂಡ ಆಪ್ತ ಸಹಾಯಕಿ

ಈ.ಡಿ.
ಕೋಲ್ಕತಾ,ಜು.25: ತನ್ನ ಮನೆಯಲ್ಲಿ ಪತ್ತೆಯಾಗಿದ್ದ 21 ಕೋ.ರೂ.ಗಳು ಪ.ಬಂಗಾಳದ ಸಚಿವ ಪಾರ್ಥಾ ಚಟರ್ಜಿ ಅವರಿಗೆ ಸೇರಿದ್ದು ಎಂದು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಜಾರಿ ನಿರ್ದೇಶನಾಲಯ (ಈ.ಡಿ.)ದ ವಿಚಾರಣೆ ಸಂದರ್ಭ ತಿಳಿಸಿದ್ದಾರೆ. ಈ ಹಣವನ್ನು ತನಗೆ ಸಂಬಂಧವಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಲು ಯೋಜಿಸಲಾಗಿತ್ತು ಎಂದಿದ್ದಾರೆ. ಒಂದೆರಡು ದಿನಗಳಲ್ಲಿ ಹಣವನ್ನು ತನ್ನ ಮನೆಯಿಂದ ಸಾಗಿಸಲು ಉದ್ದೇಶಿಸಲಾಗಿತ್ತು, ಆದರೆ ಈ.ಡಿ.ದಾಳಿ ಅದನ್ನು ವಿಫಲಗೊಳಿಸಿತು ಎಂದೂ ಅವರು ವಿಚಾರಣೆ ಸಂದರ್ಭ ತಿಳಿಸಿದ್ದಾರೆ. ಮುಖರ್ಜಿ ಮತ್ತು ಚಟರ್ಜಿ ಜಂಟಿಯಾಗಿ ಆಸ್ತಿಯನ್ನು ಹೊಂದಿದ್ದಾರೆ ಎಂದು ತಿಳಿಸಿರುವ ಈ.ಡಿ.,ಶೋಧ ಕಾರ್ಯಾಚರಣೆ ಸಂದರ್ಭ ಪತ್ತೆಯಾದ ಸಂಬಂಧಿತ ದಾಖಲೆಗಳನ್ನು ಉಲ್ಲೇಖಿಸಿದೆ. ಕೋಲ್ಕತಾ ಉಚ್ಚ ನ್ಯಾಯಾಲಯವು ರವಿವಾರ ಸಂಜೆ ಮುಖರ್ಜಿಗೆ ಒಂದು ದಿನದ ಈ.ಡಿ.ಕಸ್ಟಡಿಯನ್ನು ವಿಧಿಸಿತ್ತು.
ನನಗೆ ವೈಯಕ್ತಿಕವಾಗಿ ನೋವಾಗಿದೆ: ಮಮತಾ ಬ್ಯಾನರ್ಜಿ
ರಾಜ್ಯದಲ್ಲಿಯ ಶಿಕ್ಷಕರ ನೇಮಕಾತಿ ಹಗರಣ ಮತ್ತು ಮಾಜಿ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿಯವರ ಬಂಧನದಿಂದ ಅಂತರವನ್ನು ಕಾಯ್ದುಕೊಂಡಿರುವ ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು,ತನಗೆ ನೋವಾಗಿದೆ ಮತ್ತು ಅವರು ಇಂತಹ ಕೆಲಸವನ್ನು ಮಾಡುತ್ತಾರೆಂದು ತನಗೆ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಆರೋಪ ಸಾಬೀತಾದರೆ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದರೂ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದಾಗ್ಯೂ,‘ಅಕ್ರಮಗಳು ನಡೆದಿವೆ ಎನ್ನುವುದು ನಮಗೆ ಹೇಗೆ ಗೊತ್ತಾಗುತ್ತದೆ ’ ಎಂದು ಪ್ರಶ್ನಿಸಿದ ಮಮತಾ,ಮಾಧ್ಯಮಗಳ ವಿಚಾರಣೆಯಲ್ಲಿ ತೊಡಗಿಕೊಳ್ಳಲು ತಾನು ಬಯಸುವುದಿಲ್ಲ ಎಂದರು.
ಚಟರ್ಜಿಯನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ: ವೈದ್ಯರು
ಬಂಧಿತ ಸಚಿವ ಪಾರ್ಥಾ ಚಟರ್ಜಿಯವರಿಗೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿವೆ,ಆದರೆ ಅದಕ್ಕಾಗಿ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಏಮ್ಸ್ನ ಕಾರ್ಯಕಾರಿ ನಿರ್ದೇಶಕ ಅಶುತೋಷ ಬಿಸ್ವಾಸ್ ಅವರು ಹೇಳಿದರು. ಒಡಿಶಾದ ಭುವನೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ನಾವು ಚಟರ್ಜಿಯವರ ಸಮಗ್ರ ತಪಾಸಣೆ ನಡೆಸಿದ್ದೇವೆ. ಅವರಿಗೆ ಕೆಲವು ದೀರ್ಘಕಾಲೀನ ಕಾಯಿಲೆಗಳಿವೆ,ಆದರೆ ತಕ್ಷಣ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ’ಎಂದು ತಿಳಿಸಿದರು.
ಏರ್ ಆ್ಯಂಬುಲೆನ್ಸ್ ಮೂಲಕ ಚಟರ್ಜಿಯವರನ್ನು ನೆರೆಯ ಒಡಿಶಾದ ಆಸ್ಪತ್ರೆಗೆ ಕರೆದೊಯ್ಯುವಂತೆ ಕೋಲ್ಕತಾ ಉಚ್ಚ ನ್ಯಾಯಾಲಯವು ರವಿವಾರ ಈ.ಡಿ.ಗೆ ನಿರ್ದೇಶ ನೀಡಿತ್ತು.
ಚಟರ್ಜಿಯವರ ಆರೋಗ್ಯದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಈ.ಡಿ.ಅವರನ್ನು 14 ದಿನಗಳ ಕಾಲ ತನ್ನ ಕಸ್ಟಡಿಗೆ ನೀಡುವಂತೆ ಕೋರಿಕೊಂಡಿದೆ.
ಅರ್ಪಿತಾ ಮುಖರ್ಜಿ ನಿವಾಸದಲ್ಲಿ 20 ಕೋ.ರೂ.ಗೂ ಅಧಿಕ ಹಣ ಪತ್ತೆಯಾದ ಬಳಿಕ ಈ.ಡಿ.ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶನಿವಾರ ಚಟರ್ಜಿಯವರನ್ನು ಬಂಧಿಸಿತ್ತು.







