ಪ್ರಧಾನಿಯಾದರೆ ಚೀನಾ ವಿರುದ್ಧ ಕಠಿಣ ನಿಲುವು: ರಿಶಿ ಸುನಾಕ್
ಲಂಡನ್, ಜು. 25: ತಾನು ಬ್ರಿಟನ್ನ ಪ್ರಧಾನಿಯಾದರೆ ಚೀನಾದ ವಿರುದ್ಧ ಕಠಿಣ ನಿಲುವು ತಳೆಯುವುದಾಗಿ ಸಂಸದ ರಿಶಿ ಸುನಾಕ್ ರವಿವಾರ ಹೇಳಿದ್ದಾರೆ. ಚೀನಾವು ಆಂತರಿಕ ಮತ್ತು ಜಾಗತಿಕ ಭದ್ರತೆಗೆ ‘ನಂಬರ್ ಒಂದು ಬೆದರಿಕೆ’ಯಾಗಿದೆ ಎಂಬುದಾಗಿಯೂ ಅವರು ಬಣ್ಣಿಸಿದ್ದಾರೆ.
ಸುನಾಕ್ ಚೀನಾ ಮತ್ತು ರಶ್ಯಗಳ ಬಗ್ಗೆ ಮೃದು ಧೋರಣೆ ಹೊಂದಿರುವುದಾಗಿ ಬ್ರಿಟನ್ನ ಮುಂದಿನ ಪ್ರಧಾನಿ ಹುದ್ದೆಗೆ ಅವರ ಎದುರಾಳಿಯಾಗಿರುವ ಲಿಝ್ ಟ್ರಸ್ ಆರೋಪಿಸಿದ ಬಳಿಕ, ಮಾಜಿ ಹಣಕಾಸು ಸಚಿವ ಸುನಾಕ್ ಈ ಭರವಸೆ ನೀಡಿದ್ದಾರೆ.
ಮುಂದಿನ ಪ್ರಧಾನಿಯನ್ನು ಆರಿಸುವ ಅಂತಿಮ ಸುತ್ತಿನ ಮತದಾನದಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಸಂಸದರು ಮತದಾನ ಮಾಡಲಿದ್ದಾರೆ. ಅಂತಿಮ ಸುತ್ತಿನಲ್ಲಿ ರಿಶಿ ಸುನಾಕ್ ಮತ್ತು ಟ್ರಸ್ ಸ್ಪರ್ಧೆಯಲ್ಲಿದ್ದಾರೆ.
‘‘ಬೆಳೆಯುತ್ತಿರುವ ಬ್ರಿಟನ್-ಚೀನಾ ಸಂಬಂಧದ ಬಗ್ಗೆ ಸ್ಪಷ್ಟ ಮತ್ತು ಪ್ರಜ್ಞಾವಂತಿಕೆಯ ನಿಲುವನ್ನು ಹೊಂದಿರುವ ಏಕೈಕ ಬ್ರಿಟನ್ ಪ್ರಧಾನಿ ಅಭ್ಯರ್ಥಿ ಸುನಾಕ್’’ ಎಂಬುದಾಗಿ ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಈ ಹಿಂದೆ ಹೇಳಿತ್ತು.
‘‘ಇದು ಯಾರೂ ಬಯಸದ ಅನುಮೋದನೆ’’ ಎಂಬುದಾಗಿ ಬ್ರಿಟನ್ನ ‘ಡೇಲಿ ಮೇಲ್’ ಬಣ್ಣಿಸಿದೆ. ಅದು ವಿದೇಶ ಕಾರ್ಯದರ್ಶಿ ಟ್ರಸ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಬ್ರಿಟನ್ನಲ್ಲಿರುವ ಎಲ್ಲ 30 ಕನ್ಫ್ಯೂಶಿಯಸ್ ಇನ್ಸ್ಟಿಟ್ಯೂಟ್ಗಳನ್ನು ಮುಚ್ಚುವುದಾಗಿ ಸುನಾಕ್ ಹೇಳಿದ್ದಾರೆ. ಆ ಮೂಲಕ, ಸಂಸ್ಕೃತಿ ಮತ್ತು ಭಾಷಾ ಕಾರ್ಯಕ್ರಮಗಳ ಮೂಲಕ ಚೀನಾದ ಪ್ರಭಾವವನ್ನು ಹರಡುವ ಕಾರ್ಯಕ್ರಮಗಳಿಗೆ ತಡೆಯೊಡ್ಡುವುದಾಗಿ ಅವರು ಹೇಳಿದ್ದಾರೆ.