ಪುತ್ತಿಗೆ ಶ್ರೀಗಳ ನಾಲ್ಕನೇ ಪರ್ಯಾಯಕ್ಕೆ ಸಿದ್ಧತೆ; ಕೋಟಿ ಗೀತಾಲೇಖನ ಯಜ್ಞ ಪ್ರಚಾರ ಅಭಿಯಾನಕ್ಕೆ ಚಾಲನೆ
ಉಡುಪಿ : ನಾವು ಇಂದು ಎದುರಿಸುತ್ತಿರುವ ಎಲಾ ಸಮಸ್ಯೆಗಳಿಗೂ ಭಗವದ್ಗೀತೆಯಲ್ಲಿ ಪರಿಹಾರವಿದೆ. ಗೀತೆಯ ಮೂಲಕ ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿದೆ ಎಂದು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಪ್ರತಿಪಾದಿಸಿದ್ದಾರೆ.
ಸೋಮವಾರ ರಥಬೀದಿಯ ಪುತ್ತಿಗೆ ಮಠದಲ್ಲಿ ತಮ್ಮ ಮಹತ್ವಾಕಾಂಕ್ಷಿ ಕೋಟಿ ಗೀತಾ ಲೇಖನ ಯಜ್ಞದ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಜಗತ್ತಿನ ಪ್ರತಿಯೊಬ್ಬರೂ ಭಗವದ್ಗೀತೆಯ ಜ್ಞಾನ ಹೊಂದಿರುವುದು ಅಗತ್ಯ. ಜಗತ್ತಿನ ಇಂದಿನ ಎಲ್ಲಾ ಸಮಸ್ಯೆಗಳ ಮೂಲ ಅಹಂಕಾರ. ಮಹಾಭಾರತವೂ ಸೇರಿದಂತೆ ಜಗತ್ತಿನಲ್ಲಿ ನಡೆದ ಎಲ್ಲಾ ಯುದ್ಧಗಳಿಗೂ ಅಹಂಕಾರವೇ ಕಾರಣ. ಎಲ್ಲವೂ ಭಗವಂತನ ಅಧೀನ ಎಂಬ ಅರಿವು ಮೂಡಿದರೆ ಅಹಂಕಾರವಿರುವುದಿಲ್ಲ ಎಂದರು.
2024ರ ಜ.18ರಂದು ತಾವು ಕೈಗೊಳ್ಳುವ ನಾಲ್ಕನೇ ಪರ್ಯಾಯದ ಸಂದರ್ಭಕ್ಕಾಗಿ ಅವರು ಐದು ಮುಖ್ಯ ಯೋಜನೆಗಳನ್ನು ಇದೇ ಸಂದರ್ಬದಲ್ಲಿ ಪ್ರಕಟಿಸಿದರು. ಇವುಗಳಲ್ಲಿ ಒಂದು ಕೋಟಿ ಜನರಿಂದ ಭಗದ್ಗೀತೆ ಬರೆಸುವುದು, ಅಂತಾರಾಷ್ಟ್ರೀಯ ಭಗವದ್ಗೀತೆ ಸಮ್ಮೇಳನ, ಭಗವದ್ಗೀತೆ ಯಾಗ, ಗೀತಾಮಂದಿರದಲ್ಲಿ ಅಖಂಡ ಗೀತಾ ಪಾರಾಯಣ ಹಾಗೂ ಕಲ್ಸಂಕದ ಬಳಿ ಭವ್ಯ ಸ್ವಾಗತ ಗೋಪುರ ಹಾಗೂ ಮಧ್ವಾಚಾರ್ಯರ ಪ್ರತಿಮೆ ನಿರ್ಮಾಣ ಸೇರಿದೆ. ಅಲ್ಲದೇ ಕೃಷ್ಣನಿಗಾಗಿ ಸುವರ್ಣ ರಥ ನಿರ್ಮಿಸುವುದಾಗಿ ಅವರು ಪ್ರಕಟಿಸಿದರು.
ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಟ್ಟಾರು ರತ್ನಾಕರ ಹೆಗ್ಡೆ, ಯೋಗೀಶ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಯಶ್ವಾರ್ ಸುವರ್ಣ ಹಾಗೂ ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಉಪಸ್ಥಿತರಿದ್ದರು.