ಕಾರ್ಕಳ ತಾಲೂಕು ಕಚೇರಿಯ ಮಹಿಳಾ ಸಿಬ್ಬಂದಿ ಆತ್ಮಹತ್ಯೆ

ಕಾರ್ಕಳ : ಕಾರ್ಕಳ ತಾಲೂಕು ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಸುಶ್ಮಿತಾ (26) ರವಿವಾರ ತಡರಾತ್ರಿ ತಾವು ವಾಸವಿದ್ದ ಕುಕ್ಕಂದೂರು ತಾಲೂಕು ಪಂಚಾಯತ್ ವಸತಿಗೃಹದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಕಳದ ಪೆರ್ವಾಜೆಯವರಾದ ಅವಿವಾಹಿತೆ ಸುಶ್ಮಿತಾ ಹುಡ್ಕೋ ಕಾಲನಿಯ ಮನೆಯಲ್ಲಿ ತಂದೆ-ತಾಯಿ ಸಹೋದರನೊಂದಿಗೆ ವಾಸವಾಗಿದ್ದು, ಕಳೆದ ಆರು ವರ್ಷಗಳಿಂದ ತಾಲೂಕು ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಕರ್ತವ್ಯದ ಒತ್ತಡದಿಂದ ಇದ್ದು, ಈ ಬಗ್ಗೆ ವೈದ್ಯರಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು ಎಂದು ತಿಳಿದುಬಂದಿದೆ.
ಅವರು ಜು.24ರ ರಾತ್ರಿ ಊಟ ಮಾಡಿ ಮಲಗಿದ್ದು, 11ಗಂಟೆ ಸುಮಾರಿಗೆ ಕಾಣಿಸದೇ ಇದ್ದಾಗ ಹುಡುಕಾಡಿದಾಗ ವಸತಿಗೃಹದ ಬಾವಿ ಕಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿತ್ತು. ಬಳಿಕ ಅಗ್ನಿಶಾಮಕ ದಳದವರು ಬಂದು ಹುಡುಕಿದಾಗ ಮೃತದೇಹ ಬಾವಿಯಲ್ಲಿ ಸಿಕ್ಕಿತ್ತು. ಕೆಲಸದ ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.