ನ್ಯಾ.ಸಂದೇಶ್‍ಗೆ ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು, ಜು.25: ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಕಾರ್ಯವೈಖರಿಯನ್ನು ಮುಕ್ತ ಕಲಾಪದಲ್ಲಿ ಟೀಕೆ ಮಾಡಿದ್ದ ಹೈಕೋರ್ಟ್ ನ್ಯಾ.ಎಚ್.ಪಿ.ಸಂದೇಶ್ ಅವರಿಗೆ ಸೂಕ್ತ ಭದ್ರತೆ ನೀಡುವ ಮತ್ತು ಅವರ ವರ್ಗಾವಣೆಗೆ ಬೆದರಿಕೆ ಬಂದಿದೆ ಎನ್ನಲಾದ ಆರೋಪದ ತನಿಖೆಗಾಗಿ ವಿಶೇಷ ತನಿಖಾ ತಂಡ(ಎಸ್‍ಐಟಿ) ರಚಿಸಲು ಸರಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ವಕೀಲ ರಮೇಶ್ ಎಲ್. ನಾಯಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಬೆದರಿಕೆ ಪ್ರಕರಣದಲ್ಲಿ ನ್ಯಾ.ಸಂದೇಶ್ ಅವರಿಗೆ ಭದ್ರತೆ ಒದಗಿಸಬೇಕೆಂಬ ಮನವಿಯಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ, ಅರ್ಜಿದಾರ ರಮೇಶ್ ಅವರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ತಿಳಿಸಿದೆ.
ಎಸಿಬಿ ಮತ್ತು ಐಎಎಸ್ ಅಧಿಕಾರಿ ಸೀಮಂತ್‍ಕುಮಾರ್ ಸಿಂಗ್ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ಸುಪ್ರ್ರೀಕೋರ್ಟ್‍ನಲ್ಲಿ ನಡೆಯುತ್ತಿದೆ. ಹೀಗಾಗಿ, ಸಂದೇಶ್ ಪ್ರಕರಣದಲ್ಲಿ ತನಿಖೆಗಾಗಿ ಎಸ್‍ಐಟಿ ರಚನೆ ಕೋರಿರುವ ಮನವಿಯನ್ನು ಪರಿಗಣಿಸಲು ಬರುವುದಿಲ್ಲ ಹೈಕೋರ್ಟ್ ನ್ಯಾಯಪೀಠವು ಹೇಳಿದೆ.







