ಹಾಸಿಗೆಯಲ್ಲಿ ಮೂತ್ರಿಸಿದ್ದಕ್ಕೆ 9 ವರ್ಷದ ಮಗಳ ಗುಪ್ತಾಂಗಕ್ಕೆ ಬೆಂಕಿ ಇರಿಸಿ ಗಾಯಗೊಳಿಸಿದ ತಾಯಿ !

Photo: PTI
ಇಂದೋರ್, ಜು. 25: ತನ್ನ 9 ವರ್ಷದ ಪುತ್ರಿ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡಿರುವುದಕ್ಕೆ ಶಿಕ್ಷೆಯಾಗಿ ಮಹಿಳೆಯೋರ್ವರು ಆಕೆಯ ಗುಪ್ತಾಂಗಕ್ಕೆ ಬೆಂಕಿ ಇರಿಸಿ ಗಾಯಗೊಳಿಸಿದ ಘಟನೆ ಮಧ್ಯಪ್ರದೇಶದ ಇಂಡೋರ್ನಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಆರೋಪಿ 40 ವರ್ಷದ ಮಹಿಳೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಿಗ್ ಪೊಲೀಸ್ ಠಾಣೆಯ ಉಸ್ತುವಾರಿ ಅಜಯ್ ವರ್ಮಾ ಅವರು ತಿಳಿಸಿದ್ದಾರೆ.
ಮಹಿಳೆ ಸಂತ್ರಸ್ತ ಬಾಲಕಿಯ ಹತ್ತಿರದ ಸಂಬಂಧಿ. ಅವರು ಬಾಲಕಿಯನ್ನು ದತ್ತು ತೆಗೆದುಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ. ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡಿದ ಬಾಲಕಿಗೆ ಶಿಕ್ಷೆಯಾಗಿ ಮಹಿಳೆ ಆಕೆಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿ ಗಾಯಗೊಳಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ.
ಈ ನಡುವೆ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ)ಯ ಅಧ್ಯಕ್ಷೆ ಪಲ್ಲವಿ ಪೊರ್ವಾಲ್, ಬಾಲಕಿಯ ಗುಪ್ತಾಂಗಕ್ಕೆ ತೀವ್ರ ಸುಟ್ಟ ಗಾಯಗಳಾಗಿವೆ. ತಲೆಯ ಕೂದಲು ಕೂಡ ಸುಟ್ಟು ಹೋಗಿವೆ. ದೇಹದಲ್ಲಿ ಉಗುರಿನ ಗುರುತು ಕಂಡು ಬಂದಿದೆ ಎಂದು ಹೇಳಿದ್ದಾರೆ. ಆರೋಪಿಯ ವಿರುದ್ಧ ಪೊಲೀಸರು ಲಘು ಸೆಕ್ಷನ್ಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಪೋಕ್ಸೊ ಅಡಿಯ ಸಂಬಂಧಿತ ನಿಯಮಗಳನ್ನು ಈ ಪ್ರಕರಣದಲ್ಲಿ ಸೇರಿಸಬೇಕು ಎಂದು ಅವರು ಹೇಳಿದ್ದಾರೆ.





