ಗಾಯದ ಸಮಸ್ಯೆಯಿಂದಾಗಿ ಕಾಮನ್ವೆಲ್ತ್ ಗೇಮ್ಸ್ ನಿಂದ ಹೊರಗುಳಿಯಲಿರುವ ಜಾವೆಲಿನ್ ತಾರೆ ನೀರಜ್ ಚೋಪ್ರಾ

ಹೊಸದಿಲ್ಲಿ: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಮುಂಬರುವ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾಗವಹಿಸುವುದು ಸಂಶಯವಾಗಿದೆ. ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಈ ಕುರಿತು ಟ್ವೀಟ್ ಮಾಡಿದೆಯಲ್ಲದೆ ನೀರಜ್ ಚೋಪ್ರಾ ಅವರು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದೆಯಲ್ಲದೆ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ.
ಅಮೆರಿಕಾದ ಯುಜೀನ್ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದ ನಂತರ ಮಾಹಿತಿ ನೀಡಿದ್ದ ಚೋಪ್ರಾ ಚಾಂಪಿಯನ್ಶಿಪ್ನ ಫೈನಲ್ ವೇಳೆ ತೊಡೆಸಂಧು ಗಾಯಕ್ಕೊಳಗಾಗಿರುವುದಾಗಿ ತಿಳಿಸಿದ್ದರು.
ಫೈನಲ್ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಬೇಕೆಂದಿದ್ದರೂ ನನ್ನ ತೊಡೆಸಂದಿನಲ್ಲಿ ಕಾಣಿಸಿಕೊಂಡ ನೋವಿನಿಂದ ನಿರೀಕ್ಷಿಸಿತ ಫಲಿತಾಂಶ ದೊರಕಿಲ್ಲ, ಆದರೂ ನನ್ನ ನಿರ್ವಹಣೆಯಿಂದ ಖುಷಿಯಿದೆ ಎಂದು ಅವರು ಹೇಳಿದ್ದರು.
ನೀರಜ್ ಅವರ ವೈದ್ಯಕೀಯ ತಂಡ ಅವರಿಗೆ ಎಂಆರ್ಐ ಸ್ಕ್ಯಾನ್ ನಡೆಸಿದ್ದು ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆಂದು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದರು.
ನೀರಜ್ ಚೋಪ್ರಾ ಅವರು 2018ರಲ್ಲಿ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದರು. ನಂತರ ಟೋಕಿಯೋ ಒಲಿಂಪಿಕ್ಸ್ ನಲ್ಲೂ ಅವರಿಗೆ ಚಿನ್ನದ ಪದಕ ಒಲಿದಿತ್ತು.