ಪಿಎಸ್ಐ ನೇಮಕಾತಿ ಪ್ರಕ್ರಿಯೆ ರದ್ದುಪಡಿಸಿ; ಹೊಸದಾಗಿ ಪರೀಕ್ಷೆ ನಡೆಸಿ: ಆಪ್ ಉಪಾಧ್ಯಕ್ಷ ಭಾಸ್ಕರ್ ರಾವ್

ಉಡುಪಿ, ಜು.26: ರಾಜ್ಯದಲ್ಲಿ ದೊಡ್ಡ ಭ್ರಷ್ಟಾಚಾರದ ಹಗರಣವಾಗಿ ಹೊರಹೊಮ್ಮಿರುವ ಪಿಎಸ್ಐ ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯನ್ನೇ ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸುವಂತೆ ಮಾಜಿ ಎಡಿಜಿಪಿ ಹಾಗೂ ರಾಜ್ಯ ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ಹೇಳಿದ್ದಾರೆ.
ನಗರದ ಕಡಿಯಾಳಿಯಲ್ಲಿರುವ ಆಪ್ ಕಚೇರಿಗೆ ಮೊದಲ ಬಾರಿ ಭೇಟಿ ನೀಡಿದ ವೇಳೆ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಇಡೀ ಪ್ರಕರಣದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲೇ ತನಿಖೆ ನಡೆಯಬೇಕು ಎಂದು ಹೇಳಿದ ಅವರು, ಎಸಿಬಿ, ಸಿಐಡಿ ತನಿಖೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತನಿಖಾಧಿಕಾರಿ ಗಳಾಗಿ ಯಾರನ್ನು ಬಂಧಿಸಬೇಕು, ಯಾರನ್ನು ರಕ್ಷಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಇದ್ದಾಗಲೇ ತನಗೆ ಈ ಹಗರಣದ ವಾಸನೆ ಬಂದಿತ್ತು ಎಂದ ಭಾಸ್ಕರ ರಾವ್, ಈಗ ಹಗರಣದಲ್ಲಿ ಸಿಕ್ಕಿಬಿದ್ದಿರುವ ಹಿರಿಯ ಪೊಲೀಸ್ ಅಧಿಕಾರಿ ಅಮೃತಪಾಲ್ ಅವರಿಗೆ ಸರಕಾರದಲ್ಲಿ ಸಿಕ್ಕಿದ ಪ್ರಾಮುಖ್ಯತೆಯೇ ಇದರ ಸುಳಿವು ನೀಡಿತ್ತು. ನೇಮಕಾತಿ ಹಗರಣದಲ್ಲಿ ಅವರ ಬಂಧನವಾದಾಗ ನನ್ನ ಅನುಮಾನಗಳು ನಿಜವಾದವು ಎಂದರು.
ತಾನು ಬೆಂಗಳೂರು ಕಮಿಷನರ್ ಆಗಿದ್ದ ವೇಳೆ ಅಮೃತಪಾಲ್ ಯಾವಾಗಲೂ ಮುಖ್ಯಮಂತ್ರಿ ನಿವಾಸದ ಬಳಿ ಸುಳಿದಾಡುತಿದ್ದರು. ತಾನು ಪ್ರಶ್ನಿಸಿದಾಗ, ಹೀಗೆ ಸುಮ್ಮನೆ ಎಂದು ಹೇಳುತಿದ್ದರು. ಅವರೇ ಮುಂದಿನ ಕಮಿಷನರ್ ಆಗಿ ನೇಮಕಗೊಳ್ಳುತ್ತಾರೆ ಎಂದು ಉಹಾಪೋಹ ಹರಡಿತ್ತು, ತಾನು 1990ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಹಾಗೂ 1995ನೇ ಬ್ಯಾಚ್ನ ಅಮೃತಪಾಲ್ ನಡುವೆ ಸಾಕಷ್ಟು ಹಿರಿಯ ಅಧಿಕಾರಿಗಳಿದ್ದು, ಇವರು ಹೇಗೆ ಈ ಸ್ಥಾನ ಪಡೆಯುತ್ತಾರೆ ಎಂದು ನಾನು ಅಚ್ಚರಿಪಟ್ಟಿದ್ದೆ ಎಂದು ಭಾಸ್ಕರ ರಾವ್ ವಿವರಿಸಿದರು.
ಈಶ್ವರಪ್ಪ ಬಂಧನ ಯಾಕಿಲ್ಲ: ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಬಿ ರಿಪೋರ್ಟ್ ಹಾಕಿರುವುದು ಪೊಲೀಸರ ತನಿಖಾ ಲೋಪವಾಗಿದೆ. ವ್ಯಕ್ತಿಯೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ಸಾಮಾನ್ಯವಾಗಿ 306 ಸೆಕ್ಷನ್ ಅಡಿ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಈಶ್ವರಪ್ಪ ಅವರನ್ನು ಬಂಧಿಸದಿರಲು ಕಾರಣವೇನು ಎಂದು ಪ್ರಶ್ನಿಸಿದರು.
ಇದೀಗ ಎಲ್ಲಾ ಆರೋಪಗಳಿಂದ ಮುಕ್ತರಾಗಿರುವ ಈಶ್ವರಪ್ಪ ಅವರನ್ನು ಮತ್ತೆ ಸಚಿವರನ್ನಾಗಿ ನೇಮಿಸಿದರೆ ಆಪ್ ಪಕ್ಷ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ. ಬೆಂಗಳೂರಿನಲ್ಲಿ ರಾಜ್ಯಪಾಲ ಭವನದ ಎದುರು ಪ್ರತಿಭಟನೆ ನಡೆಸಿ ಬಂಧನ ಕ್ಕೊಳಗಾಗಲು ತಾನು ಸಿದ್ಧನಿದ್ದೇನೆ ಎಂದು ಭಾಸ್ಕರ ರಾವ್ ಎಚ್ಚರಿಸಿದರು.
ರಾಜ್ಯದಲ್ಲಿ ಲೋಕಾಯುಕ್ತ ಹಾಗೂ ಎಸಿಬಿ ಎರಡೆರಡು ತನಿಖಾ ಸಂಸ್ಥೆ ಯಾಕೆ ಬೇಕು ಎಂದು ಪ್ರಶ್ನಿಸಿದ ಅವರು, ಲೋಕಾಯುಕ್ತಕ್ಕೆ ಇನ್ನಷ್ಟು ಬಲ ತುಂಬಿ ರಾಜ್ಯದ ಮುಖ್ಯಮಂತ್ರಿಯ ವಿಚಾರಣೆ ನಡೆಸಲು ಅದಕ್ಕೆ ಅಧಿಕಾರ ನೀಡಬೇಕೆಂಬುದು ಆಪ್ನ ಬೇಡಿಕೆಯಾಗಿದೆ. ಇದೇ ವೇಳೆ ಹೊಸದಿಲ್ಲಿಯಲ್ಲಿ ಜನಲೋಕಪಾಲ್ ಮಸೂದೆ ಜಾರಿಗೊಳಿಸುವ ಕೇಜ್ರಿವಾಲ್ ಸರಕಾರದ ಪ್ರಯತ್ನಕ್ಕೆ ಕೇಂದ್ರ ಸರಕಾರ ಅಡ್ಡಿಯಾಗಿದೆ ಎಂದವರು ಆರೋಪಿಸಿದರು.
224 ಸ್ಥಾನಗಳಿಗೂ ಸ್ಪರ್ಧೆ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯದ ಎಲ್ಲಾ 224 ಸ್ಥಾನಗಳಿಗೂ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದೆ. ಅದೇ ರೀತಿ ಬಿಬಿಎಂಪಿ ಚುನಾವಣೆ, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ ಎಂದು ವಿವರಿಸಿದರು.
ಕೇವಲ ಎಂಟು ವರ್ಷಗಳಲ್ಲಿ ಅಸಾಧಾರಣ ಬೆಳವಣಿಗೆ ಕಂಡಿರುವ ಆಪ್, ಈಗಾಗಲೇ ಎರಡು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಗುಜರಾತ್, ಹರಿಯಾಣದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದೆ ಎಂದರು.
ಕರ್ನಾಟಕದಲ್ಲಿ ಕುವೆಂಪು ಕಂಡ ‘ಸರ್ವಜನಾಂಗದ ಶಾಂತಿಯ ತೋಟ’ ನಮ್ಮ ಧ್ಯೇಯವಾಗಿದ್ದು, ಇದಕ್ಕಾಗಿ ನಾವು ಕಟಿಬದ್ಧರಾಗಿರುತ್ತೇವೆ. ಇಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡುವುದು ಆಪ್ನ ಗುರಿಯಾಗಿದೆ. ಬಿಜೆಪಿ ಸರಕಾರದ ವೈಫಲ್ಯ, ವಿಫಲತೆ, ಸುಳ್ಳುಗಳು, ಜನವಿರೋಧಿ ನೀತಿಯನ್ನು ವಿರೋಧಿಸಿ ಹೋರಾಟ ನಡೆಸುತ್ತೇವೆ. ಒಟ್ಟಾರೆ ನಾವು ನೈಜ ಜಾತ್ಯತೀತ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತೇವೆ. ಶಿಕ್ಷಣ, ಆರೋಗ್ಯ, ಸಾರಿಗೆ ಹಾಗೂ ಅಭಿವೃದ್ಧಿ ನಮ್ಮ ಪ್ರಧಾನ ವಿಷಯವಾಗಿರುತ್ತದೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ದಿವಾಕರ ಸನಿಲ್, ರಾಜ್ಯ ಜಂಟಿ ಕಾರ್ಯದರ್ಶಿ ವಿವೇಕಾನಂದ ಸಾಲಿನ್, ಜಿಲ್ಲಾ ಕಾರ್ಯದರ್ಶಿ ಆ್ಯಸ್ಲಿ ಕರ್ನೇಲಿಯೊ, ವಲಯ ಮುಖ್ಯಸ್ಥ ಜೆ.ಪಿ.ರಾವ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆ ಅಭಿವೃದ್ಧಿ ಕಂಡ ಜಿಲ್ಲೆಯಾದರೂ ಇಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿಯಾಗಿಲ್ಲ. ಸುಸಜ್ಜಿತ ಸರಕಾರಿ ಆಸ್ಪತ್ರೆ, ಸರಕಾರಿ ಮೆಡಿಕಲ್ ಕಾಲೇಜು, ಜಿಲ್ಲೆಗೆ ಪ್ರತ್ಯೇಕವಾದ ಡಿಸಿಸಿ ಬ್ಯಾಂಕ್ ಇಲ್ಲಿ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ.
-ಭಾಸ್ಕರ ರಾವ್, ಮಾಜಿ ಎಡಿಜಿಪಿ, ಆಪ್ ರಾಜ್ಯ ಉಪಾಧ್ಯಕ್ಷ.