ದ.ಕ.ಜಿಲ್ಲೆಯ ಪ್ರಗತಿಗೆ ಮೂಲಭೂತವಾದ ಮತ್ತು ಧ್ರುವೀಕರಣ ರಾಜಕೀಯ ಅಡ್ಡಿ: ಎಎಪಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್

ಮಂಗಳೂರು: ದ.ಕ.ಜಿಲ್ಲೆಯ ಪ್ರಗತಿಗೆ ಎರಡೂ ಕಡೆಯ ಮೂಲಭೂತವಾದ ಮತ್ತು ಧ್ರುವೀಕರಣ ರಾಜಕೀಯವೇ ಅಡ್ಡಿಯಾಗಿದೆ. ವಿದ್ಯಾವಂತರ, ಪ್ರಜ್ಞಾವಂತರ ಜಿಲ್ಲೆಯ ಜನತೆ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದ.ಕ.ಜಿಲ್ಲೆಯಲ್ಲಿ ಅಭಿವೃದ್ಧಿಯು ಮರೀಚಿಕೆಯಾಗಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಸಾಕಷ್ಟು ಅವಕಾಶಗಳಿವೆ. ಇಲ್ಲಿನ ಜನರು ಬೇರೆ ಕಡೆ ಹೋಗಿ ತನ್ನ ಅಸ್ತಿತ್ವವನ್ನು ಕೂಡ ತೋರ್ಪಡಿಸಬಲ್ಲರು. ಆದರೆ ಉದ್ಯಮಿಗಳು, ಶ್ರೀಮಂತರು ಬಂಡವಾಳ ಹೂಡುವಂತಹ ಅವಕಾಶ ಇಲ್ಲದಂತಹ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.
*ಜೆಸಿಬಿ ಆಡಳಿತ ಸರಿ ಇದ್ದಿದ್ದರೆ ಎಎಪಿ ಅಗತ್ಯವಿರಲಿಲ್ಲ: ಜೆಸಿಬಿ ಅಂದರೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳ ಆಡಳಿತವು ಸರಿ ಇದ್ದಿದ್ದರೆ ಆಮ್ ಆದ್ಮಿ ಪಾರ್ಟಿಯ ಅಗತ್ಯವೇ ಇರಲಿಲ್ಲ. ರಾಜ್ಯದಲ್ಲಿ ಎರಡ್ಮೂರು ಬಾರಿ ಆಡಳಿತ ನಡೆಸಲು ಈ ಪಕ್ಷಗಳಿಗೆ ಅವಕಾಶ ಕೊಟ್ಟರೂ ಕೂಡ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಹಾಗಾಗಿ ಜನರ ನಡುವೆ ನಿಂತು ಕೆಲಸ ಮಾಡಬಲ್ಲ ಎಎಪಿ ಜನ್ಮತಾಳಿತು. ನಮ್ಮದು ವೃತ್ತಿ ರಾಜಕಾರಣವಲ್ಲ. ಶುದ್ಧ ರಾಜಕಾರಣ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ರಾಜ್ಯದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಮತ್ತು ಹಿಂದೂ, ಮುಸ್ಲಿಂ ತಾರತಮ್ಯ ಹೋಗಲಾಡಿಸಲು ಮುಂದಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ಗ್ರಾಮಗಳ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗುವುದು. ಹಂತ ಹಂತವಾಗಿ ನಡೆಯುವ ಎಲ್ಲಾ ಸ್ತರದ ಚುನಾವಣೆಗಳಲ್ಲೂ ಸ್ಪರ್ಧಿಸಲಿದೆ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲೂ ಪದಾಧಿಕಾರಿಗಳ ನೇಮಕ ಮಾಡಲಾಗುವುದು. ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು, ಆಟೋರಿಕ್ಷಾ, ಬೀದಿಬದಿ ವ್ಯಾಪಾರ, ವರ್ತಕರು, ವೃತ್ತಿಪರರು, ರೈತರು, ಮೀನುಗಾರರ ಘಟಕಗಳನ್ನು ಸ್ಥಾಪಿಸಲಾಗುವುದು. ಪಕ್ಷದ ಸಂಘಟನೆಗಳಿಗೆ ಒತ್ತು ನೀಡುವುದರ ಜೊತೆಗೆ ನಾಯಕತ್ವ ನೀಡಲಾಗುವುದು. ಪೊರಕೆ ಹಿಡಿದು ಪರಿಸರ ಸ್ವಚ್ಛತೆಗೂ ಆದ್ಯತೆ ನೀಡಲಾಗುವುದು. ಮತದಾರರ ಪಟ್ಟಿ ಪರಿಷ್ಕರಣೆಗೂ ಒತ್ತು ನೀಡಲಾಗುವುದು ಎಂದು ಭಾಸ್ಕರ್ ರಾವ್ ಹೇಳಿದರು.
ಬಿಜೆಪಿಗರಿಗೆ ಹಿಂದುತ್ವವೇ ಅಸ್ತ್ರವಾಗಿದೆ. ಕಾಂಗ್ರೆಸ್ ಅಹಿಂದ ವರ್ಗದ ತುಷ್ಠೀಕರಣದಲ್ಲಿ ತೊಡಗಿಸಿಕೊಂಡಿವೆ. ಆದರೆ ಎಎಪಿ ಎಲ್ಲಾ ವರ್ಗದ ಜನರ ಹಿತದ ಕಡೆ ಮಾತ್ರ ಗಮನ ಹರಿಸಲಿದೆ. ಹಿಂದೂ-ಮುಸ್ಲಿಮರ ನಡುವಿನ ಅಪನಂಬಿಕೆ ದೂರ ಮಾಡಲು ಶ್ರಮಿಸಲಿದೆ. ಸರ್ವರ ನೆಮ್ಮದಿಯ ಬದುಕಿಗೆ ಅಭಯ ನೀಡಲಿದೆ. ವಿಭಜನೆಯ ರಾಜಕೀಯಕ್ಕೆ ಕಡಿವಾಣ ಹಾಕಲಿದೆ. ಒಳ್ಳೆಯ ಶಾಲೆ, ಆಸ್ಪತ್ರೆ, ಸಾರಿಗೆ ವ್ಯವಸ್ಥೆ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಿದೆ ಎಂದು ನುಡಿದರು.
ಅನೈತಿಕ ಪೊಲೀಸ್‌ಗಿರಿ ವಿರುದ್ಧ ಕ್ರಮ ಕೈಗೊಂಡರೆ ವರ್ಗಾವಣೆ
ಜಿಲ್ಲೆಯಲ್ಲಿ ನಡೆಯುವ ಅನೈತಿಕ ಪೊಲೀಸ್‌ಗಿರಿ, ಪಬ್ ದಾಳಿ ಮರುಕಳಿಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ರಾಜಕೀಯ ಪಕ್ಷಗಳ ಬೆಂಬಲ ಇದ್ದರೆ ಮಾತ್ರ ಅನೈತಿಕ ಪೊಲೀಸ್‌ಗಿರಿ ಮಾಡಲು ಸಾಧ್ಯ. ಅಂತಹ ಪೊಲೀಸ್‌ಗಿರಿಯ ವಿರುದ್ಧ ಕ್ರಮ ಕೈಗೊಂಡರೆ ಆ ಅಧಿಕಾರಿಗಳಿಗೆ ವರ್ಗಾವಣೆ ಕಟ್ಟಿಟ್ಟಬುತ್ತಿಯಾಗಿದೆ. ಕಾನೂನು ಸುವ್ಯವಸ್ಥೆಗೆ ಬೆದರಿಕೆ ಹಾಕುವ ಯಾವುದೇ ಶಕ್ತಿಯನ್ನು ಮಟ್ಟಹಾಕಬೇಕಿದೆ. ಸತ್ಯವನ್ನು ಹೇಳಲಾಗದಂತಹ ವಾತಾವರಣದಲ್ಲಿ ಅಧಿಕಾರಿಗಳು ಇದ್ದಾರೆ. ಆದಾಗ್ಯೂ ಸತ್ಯ ಹೇಳುವಂತಹ ಧೈರ್ಯವನ್ನು ಪ್ರದರ್ಶಿಸಬೇಕಾದ ಅಗತ್ಯವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ದ.ಕ.ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಕರಾವಳಿ ಪ್ರಾಂತ್ಯದ ಅಧ್ಯಕ್ಷ ಜಯಪ್ರಕಾಶ್, ರಾಷ್ಟ್ರೀಯ ನಾಯಕ ವಿವೇಕಾನಂದ ಸನಿಲ್, ಮಾಧ್ಯಮ ಸಂಚಾಲಕ ವೆಂಕಟೇಶ್ ಬಾಳಿಗ, ಮುಖಂಡ ವೇಣುಗೋಪಾಲ ಉಪಸ್ಥಿತರಿದ್ದರು.







