ಕ್ಯಾನ್ಸರ್ ವಿಷಯವನ್ನು ರಹಸ್ಯವಾಗಿಟ್ಟಿದ್ದ ಟ್ರಂಪ್ ಅಳಿಯ: ವರದಿ
ವಾಷಿಂಗ್ಟನ್, ಜು.26: ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಸಂದರ್ಭ ಶ್ವೇತಭವನದ ಹಿರಿಯ ಸಲಹೆಗಾರರಾಗಿದ್ದ ಜರೆಡ್ ಕೂಸ್ನರ್ ಥೈರಾಯ್ಡ್ ಕ್ಯಾನ್ಸರ್ಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಮುಂದಿನ ತಿಂಗಳು ಪ್ರಕಟವಾಗಲಿರುವ ‘ಬ್ರೇಕಿಂಗ್ ಹಿಸ್ಟರಿ: ಎ ವೈಟ್ಹೌಸ್ ಮೆಮಾಯರ್’ ಎಂಬ ಕೃತಿಯಲ್ಲಿ ಈ ವಿವರಣೆಯಿದೆ.
2019ರಲ್ಲಿ ಕೂಸ್ನರ್ ಟೆಕ್ಸಾಸ್ಗೆ ಪ್ಯಾಕ್ಟರಿಯೊಂದರ ಉದ್ಘಾಟನೆಗೆ ತೆರಳಿದ್ದ ಸಂದರ್ಭ ಕ್ಯಾನ್ಸರ್ ರೋಗ ದೃಢಪಟ್ಟಿದೆ. ಆದರೆ ಅದನ್ನು ಅವರು ತನ್ನ ಪತ್ನಿ, ಟ್ರಂಪ್ರ ಪುತ್ರಿ ಇವಾಂಕಾ, ಶ್ವೇತಭವನ ಸಿಬಂದಿ ವಿಭಾಗದ ಮುಖ್ಯಸ್ಥ ಮಿಕ್ ಮುಲ್ವಾನೆ ಹಾಗೂ ಇಬ್ಬರು ಆಪ್ತಸಿಬಂದಿಗಳನ್ನು ಹೊರತುಪಡಿಸಿ ಯಾರಲ್ಲೂ ಹೇಳದೆ ರಹಸ್ಯವಾಗಿರಿಸಿದ್ದರು.
ತಾನು ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಸಂದರ್ಭ ಕರೆ ಮಾಡಿದ್ದ ಡೊನಾಲ್ಡ್ ಟ್ರಂಪ್ ಆರೋಗ್ಯ ವಿಚಾರಿಸಿದ್ದರು. ನಿಮಗೆ ಹೇಗೆ ತಿಳಿಯಿತು ಎಂದು ಆಶ್ಚರ್ಯದಿಂದ ಪ್ರಶ್ನಿಸಿದಾಗ ‘ನಾನು ಅಮೆರಿಕದ ಅಧ್ಯಕ್ಷ. ನನಗೆಲ್ಲಾ ತಿಳಿಯುತ್ತದೆ’ ಎಂದು ಟ್ರಂಪ್ ಉತ್ತರಿಸಿದ್ದರು. ಅಲ್ಲದೆ ರಹಸ್ಯವನ್ನು ರಹಸ್ಯವಾಗಿಯೇ ಇರಿಸುವ ಭರವಸೆ ನೀಡಿದ್ದರು ಎಂದು ಕೂಸ್ನರ್ ಹೇಳಿರುವುದಾಗಿ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕೃತಿ ಆಗಸ್ಟ್ 23ರಂದು ಬಿಡುಗಡೆಯಾಗಲಿದೆ





