5ಜಿ ಹರಾಜು: ಮೊದಲ ದಿನದಂದು 1.45 ಲಕ್ಷ ಕೋಟಿ ರೂ. ಬಿಡ್
ಏರ್ಟೆಲ್,ಜಿಯೋ, ಅದಾನಿ ಸಹಿತ ನಾಲ್ಕು ಕಂಪೆನಿಗಳು ಭಾಗಿ

ಹೊಸದಿಲ್ಲಿ,ಜು.26: ಭಾರತದಲ್ಲಿ 5 ಜಿ ತರಂಗಗುಚ್ಛದ ಹರಾಜು ಮಂಗಳವಾರ ಆರಂಭಗೊಂಡಿದ್ದು, ಮೊದಲ ದಿನದ ಬಿಡ್ನಲ್ಲಿ ಉದ್ಯಮ ದಿಗ್ಗಜರಾದ ಮುಖೇಶ್ ಅಂಬಾನಿ, ಸುನೀಲ್ ಬಾರ್ತಿ ಹಾಗೂ ಗೌತಮ್ ಆದಾನಿ ಒಡೆತನದ ಕಂಪೆನಿಗಳು ಭಾಗವಹಿಸಿದ್ದು, 1.45 ಲಕ್ಷ ಕೋಟಿವರೆಗೆ ಬಿಡ್ಗಳನ್ನು ಸಲ್ಲಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಖೇಶ್ ಅಂಬಾನಿಯ ರಿಲಾಯನ್ಸ್ ಜಿಯೋ, ಮಿತ್ತಲ್ ಅವರ ಭಾರ್ತಿ ಏರ್ಟೆಲ್, ವೊಡಾಫೋನ್-ಐಡಿಯಾ ಹಾಗೂ ಅದಾನಿ ನೇತೃತ್ವದ ಉದ್ಯಮ ಸಮೂಹ ಇಂದು ನಡೆದ 5ಜಿ ತರಂಗಗುಚ್ಚದ ಹರಾಜಿನಲ್ಲಿ ಸಕ್ರಿಯವಾಗಿ ಪಾಲ್ಗೊಂಡವು ಎಂದು ಮೂಲಗಳು ತಿಳಿಸಿವೆ.
ಮಂಗಳವಾರದಂದು 70 ಎಂಎಚ್ಝಡ್ ತರಂಗಾಂತರಕ್ಕಾಗಿ ಬಿಡ್ಗಳನ್ನು ಪಡೆಯಲಾಯಿತು ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಬಿಡ್ಡಿಂಗ್ನ ಮೊದಲ ದಿನದಂದು ಸರಕಾರವು 1.45 ಲಕ್ಷ ಕೋಟಿ ರೂ. ವೌಲ್ಯದ ಬಿಡ್ಗಳನ್ನು ಸ್ವೀಕರಿಸಲಾಯಿತು ಎಂದವರು ತಿಳಿಸಿದರು.
ಆದರೆ ಯಾವ ಕಂಪೆನಿಯು ಎಷ್ಟು ಪ್ರಮಾಣದ ತರಂಗಾಂತರಗಳನ್ನು ಪಡೆದುಕೊಳ್ಳುವುದಕ್ಕೆ ಸಮೀಪವಾಗಿದೆ ಎಂಬುದನ್ನು ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಬಹಿರಂಗಪಡಿಸಲಾಗುವುದಿಲ್ಲ. ಮೊದಲ ದಿನದಂದು ನಾಲ್ಕು ಸುತ್ತುಗಳ ಬಿಡ್ಡಿಂಗ್ಗಳನ್ನು ನಡೆಸಲಾಯಿತು. ಮಧ್ಯಮ ಹಾಗೂ ಅಧಿಕ ಸಾಮರ್ಥ್ಯದ ತರಂಗಾಂತರಗಳ ಬಗ್ಗೆ ಬಿಡ್ದಾರರು ಹೆಚ್ಚಿನ ಆಸಕ್ತಿಯನ್ನು ಪ್ರದರ್ಶಿಸಿದರೆಂದು ಮೂಲಗಳು ತಿಳಿಸಿವೆ.
3300 ಎಂಎಚ್ಝಡ್ ಹಾಗೂ 26 ಜಿಎಚ್ಝಡ್ ತರಂಗಾಂತರಗಳು ಬಿಡ್ದಾರರು ಹೆಚ್ಚಿನ ಒಲವು ತೋರಿದ್ದಾರೆ.
5 ಜಿ ಹರಾಜಿಗೆ ವ್ಯಕ್ತವಾಗಿರುವ ಪ್ರತಿಕ್ರಿಯೆಯನ್ನು ಕಂಡಾಗ, ಟೆಲಿಕಾಂ ಉದ್ಯಮ ಸಂಕಷ್ಟದ ಸಮಯದಿಂದ ಹೊರಬಂದಿರುವುದನ್ನು ತೋರಿಸಿದೆಯೆಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.





