11,000 ಕೋ.ರೂ. ವೆಚ್ಚ ಮಾಡಿದರೂ ಗಂಗಾ ನದಿ ಮಾಲಿನ್ಯಗೊಂಡಿದೆ ಯಾಕೆ ?: ವರುಣ್ ಗಾಂಧಿ

ಹೊಸದಿಲ್ಲಿ, ಜು. 26: ಎನ್‌ಡಿಎ ಸರಕಾರದ ಮಹತ್ವಾಕಾಂಕ್ಷೆಯ ‘ನಮಾಮಿ ಗಂಗಾ’ ಯೋಜನೆ ಬಗ್ಗೆ ಮಂಗಳವಾರ ಪ್ರಶ್ನೆ ಎತ್ತಿರುವ ಬಿಜೆಪಿ ಸಂಸದ ವರುಣ್ ಗಾಂಧಿ, 11,000 ಕೋಟಿ ರೂಪಾಯಿ ವೆಚ್ಚ ಮಾಡಿದ ಬಳಿಕವೂ ಗಂಗಾ ನದಿ ಮಾಲಿನ್ಯಗೊಂಡಿದೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಗಜೇಂದ್ರ ಸಿಂಗ್ ಶೇಖಾವತ್ ನೇತೃತ್ವದ ಜಲ ಶಕ್ತಿ ಸಚಿವಾಲಯದ ಅಡಿಯಲ್ಲಿ ಬರುವ ನವಾಮಿ ಗಂಗಾ ಯೋಜನೆಯನ್ನು ಕೇಂದ್ರ ಸರಕಾರ 2014-15ರಲ್ಲಿ ಲೋಕಾರ್ಪಣೆಗೊಳಿಸಿತ್ತು. ಈ ಯೋಜನೆಗೆ ಕೇಂದ್ರ ಸರಕಾರ 2015-2020ರ ಅವಧಿಯಲ್ಲಿ 20,000 ಕೋಟಿ ರೂಪಾಯಿ ಮಂಜೂರು ಮಾಡಿತ್ತು.
‘ನಮಾಮಿ ಗಂಗಾ’ ಯೋಜನೆ ಬಗ್ಗೆ ಪ್ರಶ್ನೆ ಎತ್ತಿರುವ ವರುಣ್ ಗಾಂಧಿ, ಗಂಗಾ ನದಿಯ ಪರಿಸ್ಥಿತಿಗೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.
‘‘ಗಂಗಾ ನದಿ ನಮಗೆ ನದಿ ಮಾತ್ರ ಅಲ್ಲ. ಅದು ನಮಗೆ ಮಾತೆ. ದೇಶದ ಕೋಟ್ಯಂತರ ಜನರ ಬದುಕು, ಧರ್ಮ ಹಾಗೂ ಅಸ್ತಿತ್ವಕ್ಕೆ ಗಂಗಾ ಮಾತೆ ಆಧಾರ. ಅದಕ್ಕಾಗಿಯೆ ನಮಾಮಿ ಗಂಗಾ ಯೋಜನೆಗೆ 20,000 ಕೋಟಿ ರೂಪಾಯಿ ಬಜೆಟ್ ಮೀಸಲಿರಿಸಿದ್ದೇವೆ’’ ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
11,000 ಕೋಟಿ ರೂಪಾಯಿ ವೆಚ್ಚ ಮಾಡಿದ ಹೊರತಾಗಿಯೂ ಗಂಗಾ ನದಿ ಮಾಲಿನ್ಯಗೊಂಡಿದೆ ಯಾಕೆ ? ಗಂಗಾ ಜೀವ ನದಿ. ಇಲ್ಲಿ ಮೀನುಗಳು ಸಾಯುತ್ತಿವೆ ಯಾಕೆ? ಇದಕ್ಕೆ ಜಲ ಮಾಲಿನ್ಯ ಕಾರಣವೇ ? ಇದಕ್ಕೆ ಯಾರು ಹೊಣೆ ಎಂದು ವರುಣ್ ಗಾಂಧಿ ಪ್ರಶ್ನಿಸಿದ್ದಾರೆ.







