ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ದಿನೇಶ್ ಅಮಿನ್ ಮಟ್ಟು ಆಯ್ಕೆ

(ದಿನೇಶ್ ಅಮಿನ್ ಮಟ್ಟು)
ಕಾರವಾರ, ಜು.26: ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಉತ್ತರಕನ್ನಡ ಜಿಲ್ಲಾ ಘಟಕ ಕೊಡಮಾಡುವ 2022ರ ಸಾಲಿನ ರಾಜ್ಯಮಟ್ಟದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮತ್ತು ಅಂಕಣಕಾರ ದಿನೇಶ್ ಅಮಿನ್ ಮಟ್ಟು ಅವರು ಆಯ್ಕೆಗೊಂಡಿದ್ದಾರೆಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ ತಿಳಿಸಿದ್ದಾರೆ.
ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಸ್ಮರಣಿಕೆ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಜು.30ರಂದು ಸಿದ್ದಾಪುರದ ಬಾಲಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಮಾಹಿತಿ ನೀಡಿದರು.
ದಿನೇಶ್ ಅಮಿನ್ ಮಟ್ಟು ಅವರು 39 ವರ್ಷಗಳಿಂದ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಕಾಂ, ಎಲ್.ಎಲ್.ಬಿ.ಪದವೀಧರರಾಗಿರುವ ಅವರು 1983ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸಂಪಾದಕತ್ವದ ‘ಮುಂಗಾರು’ ದಿನಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭಿಸಿದ್ದರು. 1989ರಿಂದ 2013ರವರೆಗೆ ಅತೀ ದೀರ್ಘಕಾಲ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸೇವೆಯನ್ನು ಸಲ್ಲಿಸಿದ್ದು, 2013ರಿಂದ 2018ರವರೆಗೆ 5 ವರ್ಷಗಳ ಕಾಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿದ್ದರು. 2010ರಲ್ಲಿ ಜಿ-20 ದೇಶಗಳ ಸಮಾವೇಶದಲ್ಲಿ ಭಾಗವಹಿಸಲು ದಕ್ಷಿಣ ಕೋರಿಯಾಗೆ ಪ್ರವಾಸ ಕೈಗೊಂಡಿರುವ ಹೆಗ್ಗಳಿಕೆ ಹೊಂದಿರುವ ಅಮಿನ್ ಮಟ್ಟು ಅವರು, ಮಾಜಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರರ ಸಮಿತಿ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋಧ್ಯಮ ವಿಭಾಗದ ಅಧ್ಯಯನ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಅಮಿನ್ ಮಟ್ಟು ಅವರ ಮಾಧ್ಯಮ ಕ್ಷೇತ್ರದಲ್ಲಿನ ಅನುಪಮ ಸೇವೆಯನ್ನು ಪರಿಗಣಿಸಿ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮನಮೋಹನ ನಾಯ್ಕ ನೀಡಿರುವ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







