ವೇಶ್ಯಾಗೃಹ ನಡೆಸುತ್ತಿದ್ದ ಆರೋಪ; ಮೇಘಾಲಯ ಬಿಜೆಪಿ ಉಪಾಧ್ಯಕ್ಷ ಬೆರ್ನಡ್ ಮರಾಕ್ ಬಂಧನ

ಬೆರ್ನಡ್ ಮರಾಕ್
ಹೊಸದಿಲ್ಲಿ: ಮೇಘಾಲಯದ ಪಶ್ಚಿಮ ಗರೊ ಜಿಲ್ಲೆಯ ತುರಾ ಎಂಬಲ್ಲಿನ ಫಾರ್ಮ್ಹೌಸ್ನಲ್ಲಿ ವೇಶ್ಯಾಗೃಹ ನಡೆಸುತ್ತಿದ್ದ ಆರೋಪದಲ್ಲಿ ಮೇಘಾಲಯ ಬಿಜೆಪಿ ಉಪಾಧ್ಯಕ್ಷ ಬೆರ್ನಡ್ ಎನ್.ಮರಾಕ್ನನ್ನು ಮಂಗಳವಾರ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಬೆರ್ನಡ್ ನ ಫಾರ್ಮ್ಹೌಸ್ ಮೇಲೆ ಶನಿವಾರ ಪೊಲೀಸರು ದಾಳಿ ನಡೆಸಿ 73 ಮಂದಿಯನ್ನು ಬಂಧಿಸಿದ ಬಳಿಕ ಈತ ತಲೆ ಮರೆಸಿಕೊಂಡಿದ್ದ. ಆರೋಪಿ ಬಿಜೆಪಿ ಮುಖಂಡ ಬೆರ್ನಡ್ ವಿರುದ್ಧ ಸೋಮವಾರ ತುರಾ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು.
ರಾಜಕೀಯ ದುರುದ್ದೇಶದಿಂದ ಮುಖ್ಯಮಂತ್ರಿ ತನ್ನನ್ನು ಗುರಿ ಮಾಡಿದ್ದಾರೆ ಎಂದು ಬೆರ್ನಡ್ ಆರೋಪಿಸಿದ್ದಾರೆ. ಅದರೆ ಪೊಲೀಸರು ತಮ್ಮ ಇಚ್ಛೆಯಂತೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಉಪ ಮುಖ್ಯಮಂತ್ರಿ ಪ್ರೆಸ್ಟೋನ್ ತ್ಯಾನ್ಸಂಗ್ ಸಮರ್ಥಿಸಿಕೊಂಡಿದ್ದಾರೆ.
"ಯಾವುದೇ ವ್ಯಕ್ತಿ ಸರ್ಕಾರದ ಭಾಗವಾಗಿರಲೀ, ಇಲ್ಲದಿರಲಿ, ಯಾವುದೇ ಪಕ್ಷದವರಿಗಾದರೂ ಕಾನೂನು ಒಂದೇ" ಎಂದು ತ್ಯಾನ್ಸಂಗ್ ಹೇಳಿದ್ದಾರೆ.
ಖಚಿತ ಸುಳಿವಿನ ಆಧಾರದಲ್ಲಿ ಪೊಲೀಸರು ಶನಿವಾರ ನಡೆಸಿದ ದಾಳಿಯ ವೇಳೆ ಪೊಲೀಸರು ನೂರಾರು ಮದ್ಯದ ಬಾಟಲಿ ಹಾಗೂ ಕಾಂಡೋಮ್ಗಳನ್ನು ವಶಪಡಿಸಿಕೊಂಡಿದ್ದರು. ಬೆರ್ನಡ್ ಮರಾಕ್ ವಿರುದ್ಧ ಈಶಾನ್ಯ ರಾಜ್ಯದ ವಿವಿಧೆಡೆಗಳಲ್ಲಿ 25 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







