ಪ್ರವೀಣ್ ಹತ್ಯೆ ಪ್ರಕರಣ: ಸ್ಥಳಕ್ಕಾಗಮಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

ಪುತ್ತೂರು, ಜು.27: ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಮೃತದೇಹದ ಮೆರವಣಿಗೆ ನಡೆಸಲು ಸಂಘ ಪರಿವಾರದ ಸಂಘಟನೆಗಳು ನಿರ್ಧರಿಸಿವೆ.
ಅದರಂತೆ ಪುತ್ತೂರು ನಗರದಿಂದ ಇದೀಗ ಕಾಲ್ನಡಿಗೆ ಮೆರವಣಿಗೆ ಹೊರಟಿದೆ. ದರ್ಬೆಯವರೆಗೆ ಕಾಲ್ನಡಿಗೆ ಮೆರವಣಿಗೆ ಸಾಗಿ ಅಲ್ಲಿಂದ ವಾಹನದ ಮೂಲಕ ಸವಣೂರು ಕಾಣಿಯೂರು, ನಿಂತಿಕಲ್ಲು ಮೂಲಕ ಬೆಳ್ಳಾರೆಗೆ ಮೃತದೇಹವನ್ನು ಕೊಂಡೊಯ್ಯಲು ಸಂಘಟನೆಗಳು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕುಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ
ಈ ನಡುವೆ ಸ್ಥಳಕ್ಕೆ ಆಗಮಿಸದ ಜನಪ್ರತಿನಿಧಿಗಳ ವಿರುದ್ಧ ಹಿಂದುತ್ವ ಸಂಘಟನೆಗಳು ಪ್ರವೀಣ್ ಮೃತದೇಹವಿದ್ದ ಪುತ್ತೂರಿನ ಖಾಸಗಿ ಆಸ್ಪತ್ರೆಯೆದುರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಮಂಗಳವಾರ ರಾತ್ರಿ ಕೊಲೆ ನಡೆದಿದೆ. ಈ ವೇಳೆ ಬೆಂಗಳೂರಿನಲ್ಲಿ ಇರುವುದಾಗಿ ಹೇಳಿದ್ದ ಜನಪ್ರತಿನಿಧಿಗಳು ಬೆಳಗ್ಗೆಯೂ ಅಲ್ಲಿಂದ ಹೊರಟಿಲ್ಲ ಎಂಬ ಮಾಹಿತಿ ನರೆದಿದ್ದ ಗುಂಪು ಕೆರಳಲು ಕಾರಣವಾಯಿತು. ರಾತ್ರಿಯೇ ಮಾಹಿತಿ ಸಿಕ್ಕಿದ್ದರೂ ಬೆಂಗಳೂರಿನಿಂದ ಇನ್ನೂ ಏಕೆ ಹೊರಟಿಲ್ಲ? ಅವರೇನು ನಮ್ಮನು ಮಂಗ ಮಾಡುತ್ತಿದ್ದಾರ? ಎಲ್ಲವೂ ಓಟಿಗಾಗಿ ಮಾಡುವುದು. ಅವರಿಗಾಗಿ ನಾವು ಕಾಯುವುದಿಲ್ಲ. ಹೆಣವನ್ನು ಮುಂದಿಟ್ಟು ಅವರು ಶೋ ಮಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಘ ಪರಿವಾರದ ಕಾರ್ಯಕರ್ತರು ಮೃತದೇಹದ ಮೆರವಣಿಗೆ ಆರಂಭಿಸಿದರು.







