ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನಿನಡಿಯಲ್ಲಿ ಆರೋಪಿಯನ್ನು ಬಂಧಿಸುವ ಈಡಿ ಅಧಿಕಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್

Photo:PTI
ಹೊಸದಿಲ್ಲಿ,ಜು.27: ಜಾರಿ ನಿರ್ದೇಶನಾಲಯ (ಈ.ಡಿ.)ವನ್ನು ಬೆಂಬಲಿಸಿ ಬುಧವಾರ ಮಹತ್ವದ ತೀರ್ಪೊಂದರಲ್ಲಿ ಸವೋಚ್ಚ ನ್ಯಾಯಾಲಯವು ತನಿಖೆಯನ್ನು ನಡೆಸುವ,ಬಂಧಿಸುವ ಸೇರಿದಂತೆ ಅದು ಹೊಂದಿರುವ ಹಲವಾರು ಅಧಿಕಾರಗಳ ಬಗ್ಗೆ ಎತ್ತಲಾಗಿದ್ದ ಎಲ್ಲ ಆಕ್ಷೇಪಗಳನ್ನು ತಿರಸ್ಕರಿಸಿದೆ.
ಅಪರಾಧದ ಹಣ,ಶೋಧ ಮತ್ತು ವಶಪಡಿಸಿಕೊಳ್ಳುವಿಕೆ,ಬಂಧನದ ಅಧಿಕಾರ,ಆಸ್ತಿಗಳ ಜಪ್ತಿ ಮತ್ತು ಜಾಮೀನಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ಎಲ್ಲ ಕಠಿಣ ನಿಬಂಧನೆಗಳನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ. ಇವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.
ಬಂಧನದ ಅಧಿಕಾರವನ್ನು ನೀಡಿರುವ ಕಾಯ್ದೆಯ 19ನೇ ಕಲಮ್ನಲ್ಲಿ ನಿರಂಕುಶತೆಯ ಯಾವುದೇ ಅಂಶವಿಲ್ಲ ಎಂದು ತಿಳಿಸಿರುವ ಸರ್ವೋಚ್ಚ ನ್ಯಾಯಾಲಯವು,ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವವರ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ ಕಲಂ 5 ಸಹ ಸಾಂವಿಧಾನಿಕ ಸಿಂಧುತ್ವವನ್ನು ಹೊಂದಿದೆ ಎಂದು ಹೇಳಿದೆ.
ಅಕ್ರಮ ಹಣ ವರ್ಗಾವಣೆಯು ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ವರೂಪದ ಮೇಲೆ ದುಷ್ಪರಿಣಾಮ ಬೀರುವುದು ಮಾತ್ರವಲ್ಲ, ಭಯೋತ್ಪಾದನೆ,ಮಾದಕ ದ್ರವ್ಯಗಳ ಕಾಯ್ದೆಗೆ ಸಂಬಂಧಿಸಿದ ಅಪರಾಧಗಳಂತಹ ಇತರ ಘೋರ ಅಪರಾಧಗಳನ್ನೂ ಉತ್ತೇಜಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಬಂಧನಕ್ಕೆ ಆಧಾರ ಮತ್ತು ಸಾಕ್ಷಗಳ ಕುರಿತು ಮಾಹಿತಿಯನ್ನು ಆರೋಪಿಗಳಿಗೆ ನೀಡದೆ ಅವರನ್ನು ಬಂಧಿಸುವ ಅನಿಯಂತ್ರಿತ ಅಧಿಕಾರವು ಅಸಾಂವಿಧಾನಿಕವಾಗಿದೆ ಎಂದು ವಾದಿಸಿದ್ದ ಅರ್ಜಿದಾರರು, ಈ.ಡಿ.ವಿಚಾರಣೆಯ ಸಂದರ್ಭದಲ್ಲಿ ಮಾಹಿತಿಗಳನ್ನು ಬಚ್ಚಿಟ್ಟರೆ ದಂಡದ ಬೆದರಿಕೆಯನ್ನೊಡ್ಡುವ ಮೂಲಕ ಆರೋಪಿಯಿಂದ ದೋಷಾರೋಪಕ್ಕೆ ಒಳಪಡಿಸುವ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದು ಬಲವಂತಕ್ಕೆ ಸಮಾನವಾಗಿದೆ ಎಂದು ಬೆಟ್ಟು ಮಾಡಿದ್ದರು.
ಎನ್ಫೋರ್ಸ್ಮೆಂಟ್ ಕೇಸ್ ಇನ್ಫಾರ್ಮೇಷನ್ ರಿಪೋರ್ಟ್ (ಈಸಿಐಆರ್) (ಈಸಿಐಆರ್) ಪೊಲೀಸ್ ಎಫ್ಐಆರ್ಗೆ ಸಮವಾಗಿದೆ ಮತ್ತು ಆರೋಪಿಗೆ ಅದರ ಪ್ರತಿಯನ್ನು ಪಡೆಯುವ ಹಕ್ಕು ಇದೆ ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು, ಈಸಿಐಆರ್ ಆಂತರಿಕ ದಾಖಲೆಯಾಗಿರುವುದರಿಂದ ಪ್ರತಿಯೊಂದೂ ಪ್ರಕರಣದಲ್ಲಿ ಅದನ್ನು ಒದಗಿಸುವುದು ಕಡ್ಡಾಯವಲ್ಲ,ಬಂಧನದ ಸಮಯದಲ್ಲಿ ಅದಕ್ಕೆ ಕಾರಣಗಳನ್ನು ಈ.ಡಿ.ತಿಳಿಸಿದರೆ ಸಾಕಾಗುತ್ತದೆ ಎಂದು ಹೇಳಿತು.
ತಾನು ತಪ್ಪಿತಸ್ಥನಲ್ಲ ಎನ್ನುವುದನ್ನು ಸಾಬೀತುಗೊಳಿಸಲು ಪುರಾವೆಗಳನ್ನು ಒದಗಿಸುವ ಹೊರೆಯನ್ನು ಆರೋಪಿಯ ಮೇಲೆ ಹೊರಿಸುವುದು ಸಮಾನತೆಯ ಮತ್ತು ಜೀವಿಸುವ ಹಕ್ಕುಗಳಂತಹ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಅಕ್ರಮ ಹಣ ವರ್ಗಾವಣೆ ಅಪರಾಧಗಳ ಗಂಭೀರ ಸ್ವರೂಪ ಮತ್ತು ಅದನ್ನು ತಡೆಯುವ ಸಾಮಾಜಿಕ ಅಗತ್ಯಕ್ಕೆ ಅನುಗುಣವಾಗಿ ಪುರಾವೆಗಳ ಹೊರೆಯನ್ನು ಆರೋಪಿಯ ಮೇಲೆ ಹೊರಿಸುವುದು ಸಮರ್ಥನೀಯವಾಗಿದೆ ಎಂದು ಪ್ರತಿಪಾದಿಸಿದರು.
ಪಿಎಂಎಲ್ಎ 2002ರಲ್ಲಿ ಅಸ್ತಿತ್ವಕ್ಕೆ ಬಂದಿರುವುದರಿಂದ ಅದಕ್ಕಿಂತ ಮೊದಲಿನ ಪ್ರಕರಣಗಳಲ್ಲಿ ಈ ಕಾಯ್ದೆಯಡಿ ಆರೋಪಗಳನ್ನು ದಾಖಲಿಸುವುದು ಅಸಾಂವಿಧಾನಿಕವಾಗಿದೆ ಎಂಬ ಅರ್ಜಿದಾರರ ವಾದವನ್ನೂ ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿತು. ಅಕ್ರಮ ಹಣ ವರ್ಗಾವಣೆಯು ನಿರಂತರ ಅಪರಾಧವಾಗಿದೆ ಮತ್ತು ಅದು ಒಂದು ಕೃತ್ಯವಲ್ಲ,ಆದರೆ ಸರಣಿಯಾಗಿದೆ. ಅಪರಾಧದಿಂದ ಹಣ 2002ರ ಮೊದಲು ಸೃಷ್ಟಿಯಾಗಿರಬಹುದು,ಆದರೆ 2002ರ ನಂತರವೂ ಆರೋಪಿಯ ವಶದಲ್ಲಿರಬಹುದು ಅಥವಾ ಆರೋಪಿಯು ಅದನ್ನು ಬಳಸುತ್ತಿರಬಹುದು,ಹೀಗಾಗಿ ಇದು ಸಮರ್ಥನೀಯವಾಗಿದೆ ಎಂದು ಸರಕಾರವು ಪ್ರತಿಪಾದಿಸಿತು.
ಮೋದಿ ಸರಕಾರದಡಿ ಈ.ಡಿ.ದಾಳಿಗಳ ಸಂಖ್ಯೆಯು 26 ಪಟ್ಟು ಹೆಚ್ಚಿದೆ,ಆದರೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಈಡಿ ನಡೆಸಿದ್ದ 3010 ಅಕ್ರಮ ಹಣ ವರ್ಗಾವಣೆ ಶೋಧಗಳಲ್ಲಿ ಕೇವಲ 23 ಆರೋಪಿಗಳು ಶಿಕ್ಷೆಗೊಳಗಾಗಿದ್ದಾರೆ ಎಂದು ವಿತ್ತ ಸಚಿವಾಲಯವು ಸೋಮವಾರ ರಾಜ್ಯಸಭೆಯಲ್ಲಿ ತಿಳಿಸಿತ್ತು. 2004-2014ರ ಅವಧಿಯಲ್ಲಿ 112 ಶೋಧ ಕಾರ್ಯಾಚರಣೆಗಳು ನಡೆದಿದ್ದವು,ಆದರೆ ಯಾರಿಗೂ ಶಿಕ್ಷೆಯಾಗಿರಲಿಲ್ಲ ಎಂದೂ ಅದು ಹೇಳಿತ್ತು.
ರಾಜಕಾರಣಿ ಕಾರ್ತಿ ಚಿದಂಬರಂ ಮತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸೇರಿದಂತೆ ಹಲವರು ಪಿಎಂಎಲ್ಎ ನಿಬಂಧನೆಗಳನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.







