ಮಧ್ಯಪ್ರದೇಶ: ದಲಿತ ಬಾಲಕಿ ಶಾಲೆಗೆ ಹೋಗದಂತೆ ತಡೆದ ಗ್ರಾಮಸ್ಥರು!

ಭೋಪಾಲ್: ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಬವಾಲಿಯಾಖೇಡಿಯಲ್ಲಿ 16 ವರ್ಷದ ದಲಿತ ಬಾಲಕಿಯನ್ನು ಶಾಲೆಗೆ ಹೋಗದಂತೆ ಗ್ರಾಮಸ್ಥರ ಗುಂಪು ತಡೆದಿದೆ ಎಂದು ಮಂಗಳವಾರ ಪಿಟಿಐ ವರದಿ ಮಾಡಿದೆ.
ಜುಲೈ 23 ರಂದು ಆರೋಪಿಗಳು ತನ್ನ ಶಾಲಾ ಬ್ಯಾಗನ್ನು ಕಿತ್ತುಕೊಂಡು ತರಗತಿಗೆ ಹೋಗದಂತೆ ತಡೆದರು. ಗ್ರಾಮದ ಇತರ ಹುಡುಗಿಯರು ಶಾಲೆಗೆ ಹೋಗುವುದಿಲ್ಲ ಎಂದು ಆರೋಪಿಗಳು ತನಗೆ ಹೇಳಿದ್ದರು ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.
ಬಾಲಕಿಯ ಕುಟುಂಬ ಹಾಗೂ ಬಾಲಕಿಯನ್ನು ಶಾಲೆಗೆ ಹೋದಂತೆ ತಡೆದ ಆರೋಪಿಗಳ ಸಂಬಂಧಿಕರ ನಡುವೆ ಘರ್ಷಣೆ ಸಂಭವಿಸಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅವಧೇಶ್ ಕುಮಾರ್ ಶೇಷಾ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಶೇಷ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಆರೋಪ ಹೊರಿಸಲಾಗಿದೆ.
ದಲಿತ ಹುಡುಗಿಯ ಸಹೋದರ ಹಾಗೂ ಇತರ ಮೂವರ ವಿರುದ್ಧ ಹಲ್ಲೆ ಆರೋಪ ಹೊರಿಸಿ ಪ್ರತಿ ದೂರು ದಾಖಲಾಗಿದೆ.





