VIDEO- ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಲವು ಬಿಜೆಪಿ ನಾಯಕರ ರಾಜೀನಾಮೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವೆಡೆ ಬಿಜೆಪಿಯ ಜಿಲ್ಲಾ ಯುವ ಮೋರ್ಚಾ ಸೇರಿ ವಿವಿಧ ಹುದ್ದೆಗಳಿಗೆ ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರೆ.
ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಯುವ ಮೋರ್ಚಾ, ಜಿಲ್ಲೆಯ 9 ಮಂಡಲಗಳ ಅಧ್ಯಕ್ಷರು ಬುಧವಾರ ರಾಜೀನಾಮೆ ನೀಡಿದ್ದು, ಪ್ರವೀಣ್ ಸಾವು ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟ. ರಾತ್ರಿ ಸಮಯದಲ್ಲಿ ಹಿಂದಿನಿಂದ ಬಂದು ಹೊಡೆದಿರುವುದು ಹೇಡಿಗಳ ಕೃತ್ಯವಾಗಿದೆ. ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದ ಹುಡುಗ ಸಮಾಜಕ್ಕಾಗಿ ಪ್ರಾಣ ತೆತ್ತಿರುವುದು ದುರ್ದೈವದ ಸಂಗತಿ. ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಚಿಕ್ಕಮಗಳೂರು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂದೀಪ್ ಹರಿವಿನಗಂಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮೂಡಿಗೆರೆ, ಕೊಪ್ಪ, ಸೇರಿದಂತೆ ಹಲವೆಡೆ ಯುವ ಮೋರ್ಚಾದ ಅಧ್ಯಕ್ಷ, ಕಾರ್ಯದರ್ಶಿ ಸ್ಥಾನಕ್ಕೆ ಯುವ ಮುಖಂಡರು ರಾಜೀನಾಮೆ ಸಲ್ಲಿಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಬಾಗಕೋಟೆ ಜಿಲ್ಲಾ ಯುವ ಮೋರ್ಚಾದ 12 ಮಂಡಲಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಜೀನಾಮೆ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಸ್ಥಾನಕ್ಕೆ ಶಕುಂತಲಾ ನಟರಾಜ್ ರಾಜೀನಾಮೆ ನೀಡಿದ್ದಾರೆ.







