ರಾಜಕೀಯ ಪ್ರೇರಿತ ಕೊಲೆಗಳಿಂದ ಹೆತ್ತವರಿಗೆ ಸಿಕ್ಕಿದ್ದು ಶವ ಮಾತ್ರ: ಮಿಥುನ್ ರೈ

ಮಂಗಳೂರು, ಜು.27: ಕೋಮು ದ್ವೇಷದಿಂದ ನಡೆದ ಸುರತ್ಕಲ್‌ನ ಉದಯ ಪೂಜಾರಿ, ಮಸೂದ್ ಹತ್ಯೆ ಹಾಗೂ ಪ್ರವೀಣ್ ನೆಟ್ಟಾರುವರೆಗಿನ ಹತ್ಯೆಯು ಅವರ ಹೆತ್ತವರಿಗೆ ಸಿಕ್ಕಿದ್ದು ಶವ ಮಾತ್ರ. ಈ ಬಗ್ಗೆ ಯುವಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಬೆಳ್ಳಾರೆಯಲ್ಲಿ ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೊರೆಯಲಿ ಎಂದರು. ಮಸೂದ್ ಮತ್ತು ಪ್ರವೀಣ್ ಕುಟುಂಬಕ್ಕೆ ಗರಿಷ್ಠ ಮಟ್ಟದ ಪರಿಹಾರ ನೀಡಬೇಕು. ಜಿಲ್ಲೆಯ ಜನತೆ ಶಾಂತಿಯನ್ನು ಕಾಪಾಡಿಕೊಂಡು ಮುಂದೆ ಇಂತಹ ಘಟನೆ ಆಗದಂತೆ ಸೌಹಾರ್ದತೆ ಕಾಪಾಡಬೇಕು ಎಂದು ಮಿಥುನ್ ರೈ ಹೇಳಿದರು.
ರಾಜಕಾರಣಿಗಳ ಪ್ರಚೋದನೆಯ ಮಾತುಗಳಿಂದ ಪ್ರೇರಿತರಾಗಿ ದ್ವೇಷದಿಂದ ನಡೆಯುವ ಯುವಕರ ಕೊಲೆಗಳಿಂದ ಅಧಿಕಾರಕ್ಕೆ ಬಂದ ಶಾಸಕರು, ಮಂತ್ರಿಯಾದವರು ಬಳಿಕ ಬಲಿ ಪಡೆದವರ ಮನೆಯವರ ನೋವನ್ನು ಆಲಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಇವರ ಕಪಟ ಹಿಂದುತ್ವ ಎಲ್ಲಿ ಹೋಗುತ್ತದೆ ಎಂದು ಮಿಥುನ್ ರೈ ಪ್ರಶ್ನಿಸಿದರು.
ಯುವಕರು ಇಂತಹ ಕೋಮು ದ್ವೇಷಕ್ಕೆ ಪ್ರೇರಿತರಾಗದೆ, ಸ್ವಾಭಿಮಾನದಿಂದ ಬದುಕು ಕಟ್ಟುವ ಕೆಲಸ ಮಾಡಬೇಕು. ಯಾರದೋ ಮಾತಿನಿಂದ ಪ್ರೇರಣೆ ಪಡೆದು ಹೆತ್ತವರ ಕಣ್ಣೀರು ಹಾಕುವ ಕೆಲಸ ಮಾಡಬಾರದು. ಜಿಲ್ಲೆಯಲ್ಲಿ ಈವರೆಗೂ ಕೋಮು ಗಲಭೆಯಿಂದ ಮೃತುಪಟ್ಟವರ ಕುಟುಂಬಕ್ಕೆ ಆದ ದು:ಖ ಅವರಿಗೆ ಮಾತ್ರ ಗೊತ್ತು. ಯಾರೇ ಅಧಿಕಾರದಲ್ಲಿದ್ದರೂ ಈ ರೀತಿ ಹಲ್ಲೆ, ಕೊಲೆಯಂತಹ ಕೃತ್ಯ ಮಾಡಿ ರಾಜಕೀಯ ಮಾಡಬಾರದು. ಯುವಕರನ್ನು ಉಪಯೋಗಿಸಿಕೊಂಡು ರಾಜಕೀಯ ಮಾಡುವ ರಾಜಕಾರಣಿಗಳಿಗೆ ಯುವಕರು ಸರಿಯಾದ ಉತ್ತರ ನೀಡಬೇಕು ಎಂದು ಅವರು ಹೇಳಿದರು.
ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಕಾನೂನಿನಡಿ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಮಾತನಾಡಿ, ಸಮಾಜ ಘಾತುಕ ಶಕ್ತಿಗಳಿಗೆ, ಕೊಲೆಗಡುಕರಿಗೆ ಸರಕಾರದ ಭಯವೇ ಇಲ್ಲವಾಗಿದೆ. ಒಂದೆಡೆ ಈ ಬಿಜೆಪಿ ಸರಕಾರದಲ್ಲಿ ಜನಸಾಮಾನ್ಯರಿಗೆ ನೆಮ್ಮದಿಯಿಲ್ಲ. ಈ ರೀತಿ ಅಮಾಯಕರನ್ನು ಕೊಲೆ ಮಾಡುವಂತವರಿಗೆ ಸರಕಾರ ಕಾನೂನಿನ ಭಯ ಮುಟ್ಟಿಸುತ್ತಿಲ್ಲ. ಪೊಲೀಸ್ ಇಲಾಖೆ ಮೌನ ವಹಿಸಿದೆ ಎಂದರು.
ಮಸೂದ್, ಪ್ರವೀಣ್ ಹತ್ಯೆಯ ಸಂದರ್ಭ ಹರಿದಿದ್ದು ಕೆಂಪು ರಕ್ತ, ಇಬ್ಬರ ಹೆತ್ತವರ ನೋವು ಒಂದೇ ಆಗಿದೆ. ಅಧಿಕಾರಕ್ಕೆ ಬರುವಾಗ ಧರ್ಮಗಳನ್ನು ಎತ್ತಿಕಟ್ಟಿ ಪ್ರಚಾರ ಮಾಡುವ ರಾಜಕಾರಣಿಗಳಿಂದ ಬಡವರ ಮಕ್ಕಳು ಬಲಿಪಶುಗಳಾಗುತ್ತಾರೆ. ಹತ್ಯೆಯಾದ ಪ್ರವೀಣ್ ಮನೆಯಲ್ಲಿನ ಕಂಡ ಕೂಗು, ಆಕ್ರಂದನ ಅವರ ಸ್ನೇಹಿತರು, ಕುಟುಂಬಸ್ಥರು ಹೇಳುವ ಮಾತು ನೋವಿನ ವಿಚಾರ. ಸಂಬಂಧಪಟ್ಟ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಯುವಜನರಿಗೆ ಸೌಹಾರ್ದತೆಯ ಸಂದೇಶವನ್ನು ಯಾಕೆ ಅವರು ನೀಡುತ್ತಿಲ್ಲ ಎಂದು ಪ್ರಶ್ನಿಸಿದ ಮಮತಾ ಗಟ್ಟಿ, ಜಿಲ್ಲೆಯಲ್ಲಿ ಕೋಮು ವಿಷ ಬೀಜ ಬಿತ್ತುವುದರಿಂದ ಅಭಿವೃದ್ಧಿಗೆ ಮಾರಕವಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಅನಿಲ್ ಕುಮಾರ್, ಅಪ್ಪಿ, ಸಂತೋಷ್ ಶೆಟ್ಟಿ, ಮಲ್ಲಿಕಾ, ಶುಭೋದಯ ಆಳ್ವ, ಸವಾದ್ ಸುಳ್ಯ, ಶಾಂತಲಾ ಗಟ್ಟಿ, ಸುಭಾಶ್ಚಂದ್ರ ಶೆಟ್ಟಿ, ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು.