ಈಡಿ ಹೆಸರಿನಲ್ಲಿ ಸೋನಿಯಾ ಗಾಂಧಿಗೆ ಕಿರುಕುಳ ಆರೋಪ; ಕಾಂಗ್ರೆಸ್ ನೇತೃತ್ವದಲ್ಲಿ ಸತ್ಯಾಗ್ರಹ

ಉಡುಪಿ : ಈಡಿ ವಿಚಾರಣೆ ಹೆಸರಿನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಬಿಜೆಪಿ ಸರಕಾರದ ಕ್ರಮವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಬುಧವಾರ ಅಜ್ಜರಕಾಡು ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ ನಡೆಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳುತ್ತಿದ್ದ ಬಿಜೆಪಿಗೆ ಅದು ಸಾಧ್ಯವಾಗದ್ದೆ ಇದ್ದಾಗ ಸುಳ್ಳು ಆರೋಪದಡಿ ಈಡಿ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕಿರುಕುಳ ನೀಡುವ ಕಾರ್ಯಕ್ಕೆ ಕೈ ಹಾಕಿದೆ. ಇದನ್ನು ವಿರೋಧಿಸಿ ಸತ್ಯಾಗ್ರಹವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ನಡೆದ ಸತ್ಯಾಗ್ರಹದಲ್ಲಿ ದೇಶಭಕ್ತಿ ಗೀತೆ, ಭಜನೆ ಯನ್ನು ಹಾಡಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ಯಾನಲಿಸ್ಟ್ ವರೋನಿಕಾ ಕರ್ನೆಲಿಯೋ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ದಿನೇಶ್ ಪುತ್ರನ್, ಮುರಳೀ ಶೆಟ್ಟಿ, ಯತೀಶ್ ಕರ್ಕೇರ, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ಹಬೀಬ್ ಅಲಿ, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ದಿವಾಕರ್ ಕುಂದರ್, ಮೀನಾಕ್ಷಿ ಮಾಧವ ಬನ್ನಂಜೆ, ಫಾ.ವಿಲಿಯಂ ಮಾರ್ಟಿಸ್, ಸುಕೇಶ್ ಕುಂದರ್, ಹರೀಶ್ ಶೆಟ್ಟಿ, ಪುಷ್ಪಾ ಅಂಚನ್, ಲೂವಿಸ್ ಲೊಬೋ, ಹಮದ್, ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







