ಮಡಿಕೇರಿ: ಕಿಟಕಿಯ ಸರಳನ್ನು ಮುರಿದು ಮನೆಯೊಳಗಿದ್ದ ಅಕ್ಕಿಯನ್ನು ತಿಂದ ಕಾಡಾನೆ

ಮಡಿಕೇರಿ ಜು.27 : ನಸುಕಿನ ವೇಳೆಯಲ್ಲಿ ಮನೆಯ ಕಿಟಕಿಯ ಕಬ್ಬಿಣದ ಸರಳನ್ನು ಮುರಿದ ಕಾಡಾನೆಯೊಂದು ಸೊಂಡಿಲನ್ನು ಹಾಕಿ ಅಕ್ಕಿಯನ್ನು ತಿಂದಿರುವ ಘಟನೆ ಸೋಮವಾರಪೇಟೆ ಸಮೀಪದ ಗಣಗೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಪಾರ್ವತಿ ಎಂಬುವವರ ಮನೆಗೆ ಬುಧವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿನಲ್ಲಿ ಬಂದ ಕಾಡಾನೆ ಕಿಟಕಿಯ ಸರಳನ್ನು ಮುರಿದು ಸೊಂಡಿಲ ಮೂಲಕ ಅಕ್ಕಿಯನ್ನು ತಿಂದಿದೆ. ಶಬ್ಧದಿಂದ ಎಚ್ಚರಗೊಂಡ ಪಾರ್ವತಿ ಹಾಗೂ ಅವರ ಪುತ್ರ ವಿಕಾಸ್ ಆನೆಯನ್ನು ಕಂಡು ಬೊಬ್ಬೆ ಹೊಡೆದಿದ್ದಾರೆ. ಈ ಸಂದರ್ಭ ಕಾಡಾನೆ ಸ್ಥಳದಿಂದ ತೆರಳಿದೆ.
ಆರ್‍ಎಫ್‍ಒ ಚೇತನ್, ಫಾರೆಸ್ಟರ್ ರಾಕೇಶ್ ಸ್ಥಳ ಪರಿಶೀಲನೆ ನಡೆಸಿದರು. ಕಾಡಾನೆ ದಾಳಿಯಿಂದ ಮನೆಯ ಕಿಟಕಿ ಹಾಗೂ ಗೋಡೆಗೆ ಹಾನಿಯಾಗಿದೆ. ಸೂಕ್ತ ಪರಿಹಾರ ನೀಡಬೇಕೆಂದು ವಿಕಾಸ್ ಒತ್ತಾಯಿಸಿದ್ದಾರೆ.
Next Story





