ಪ್ರವೀಣ್ ಹತ್ಯೆ ಸಂಬಂಧ 9 ಮಂದಿ ವಶಕ್ಕೆ: ಸಚಿವ ಸುನಿಲ್ ಕುಮಾರ್

ಸಚಿವ ಸುನಿಲ್ ಕುಮಾರ್
ಮಂಗಳೂರು, ಜು.27: ನಿನ್ನೆ ರಾತ್ರಿ ಸುಳ್ಯದಲ್ಲಿ ನಡೆದ ಘಟನೆಯಲ್ಲಿ ಮನೆಯ ಮಗನನ್ನು ನಾವು ಕಳೆದುಕೊಂಡಿದ್ದೇವೆ. ಅತ್ಯಂತ ದು:ಖ ಆಕ್ರೋಶ ನಮ್ಮ ನಡುವೆ ಇದೆ. ಈ ಹತ್ಯೆಗೆ ಉತ್ತರವನ್ನು ಸರಕಾರ ಖಂಡಿತಾ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಪ್ರವೀಣ್ ಹತ್ಯೆಗೆ ಸಂಬಂಧಿಸಿ ಕಾರ್ಯಕರ್ತರ ಆಕ್ರೋಶಕ್ಕೆ ಧ್ವನಿಯಾಗಿ ಸರಕಾರ ಕೆಲಸ ಮಾಡಲಿದೆ. ಈಗಾಗಲೇ ಒಂಭತ್ತು ಜನರನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ತನಿಖೆ ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿಗೆ ಬಂದಿದ್ದಾರೆ. ಈ ತನಿಖೆಯನ್ನು ಚುರುಕುಗೊಳಿಸಿ ಆರೋಪಿಗಳಿಗೆ ಯಾವ ರೀತಿ ತಕ್ಕ ಶಿಕ್ಷೆಯಾಗಬೇಕೋ ಆ ರೀತಿಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಏನು ಸಾಧ್ಯವೋ ಅದನ್ನು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿಂದೂ ಸಂಘಟನೆಯ ಮೂಲಕವೇ ಸಾರ್ವಜನಿಕ ಕ್ಷೇತ್ರಕ್ಕೆ ಬಂದವ. ಅಂದಿನ ನೋವುಗಳ ಮೂಲಕವೇ ಇಂದು ರಾಜಕೀಯ ಕ್ಷೇತ್ರದಲ್ಲಿ ಬಂದು ಕೆಲಸ ಕಾರ್ಯ ನಡೆಸುತ್ತಿರುವ ನನಗೆ ಕಾರ್ಯಕರ್ತರ ಭಾವನೆ, ಸಹಜವಾದ ಆಕ್ರೋಶ ನೇರವಾಗಿ ಹಾಗೂ ಅಧಿಕಾರದಲ್ಲಿದ್ದು ನೋಡಿಕೊಂಡು ಬಂದಿದ್ದೇನೆ. ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡಾಗ ಆಗುವ ನೋವು ಸಹಜವಾಗಿ ಇರುತ್ತದೆ. ಅವರ ಕುಟುಂಬದವರ ಜತೆ ನಾವಿದ್ದೇವೆ. ಆ ಕುಟುಂಬದ ಜತೆ ಯಾವ ರೀತಿ ನಿಲ್ಲಲು ಸಾಧ್ಯವಾಗಲಿದೆಯೋ ನಿಲ್ಲಲಿದ್ದೇವೆ. ಮುಂದೆ ಯಾವ ರೀತಿ ಇಂತಹ ಘಟನೆಗಳಿಗೆ ಶಿಕ್ಷೆ, ಜಿಲ್ಲೆಯ ಶಾಂತಿ ಕಾಪಾಡುವುದು ಹಾಗೂ ಬಂದೋಬಸ್ತ್ನ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗುವುದು. ಮುಖ್ಯಮಂತ್ರಿ ಜತೆ ನಿರಂತರವಾದ ಸಂಪರ್ಕದಲ್ಲಿದ್ದೇನೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಸರಕಾರ ಕೈಕಟ್ಟಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಯಾವಾಗ ಈ ಜಿಹಾದಿ ಮಾನಸಿಕತೆ ಇದೆಯೋ ಇದನ್ನು ಮಟ್ಟಹಾಕಲು ಸರ್ವ ಸನ್ನದ್ಧವಾಗಿದೆ. ಕಾರ್ಯಕರ್ತರು ಮತ್ತು ಸಾರ್ವಜನಿಕವಾಗಿ ಪೊಲೀಸರ ಮೂಲಕ ಬಿಗಿ ಕ್ರಮ ಆಗಬೇಕೆಂಬ ಆಕ್ರೋಶ ವ್ಯಕ್ತವಾಗಿದೆ. ಅದಕ್ಕೆ ಸಹಮತವಿದೆ. ಇದೇ ರೀತಿಯ ಸರಣಿ ಹತ್ಯಾಕಾಂಡಗಳು ದೇಶದಲ್ಲೆಡೆ ನಡೆಯುತ್ತಿದೆ. ವ್ಯವಸ್ಥಿತವಾಗಿ ಉತ್ತರದಿಂದ ದಕ್ಷಿಣದವರೆಗೆ ಜಿಹಾದಿ ಮಾನಸಿಕತೆಯ ಮತೀಯ ಶಕ್ತಿಗಳು ಏನು ಆಕ್ರಮಣ ನಡೆಸುತ್ತಿದ್ದಾರೆಯೋ ಇದು ಒಬ್ಬ ಕಾರ್ಯಕರ್ತನ ಮೇಲಿನ ಹಲ್ಲೆಯ ಜತೆಯಲ್ಲೇ ಒಂದು ವಿಚಾರದ ಮೇಲೆ ಗುರಿಯಾಗಿಸಿ ಹತ್ಯೆ ನಡೆಯುತ್ತಿದೆ. ಇಡೀ ದೇಶದಲ್ಲಿ ಇದು ವಿಸ್ತರಿಸುತ್ತಿದೆ. ಎರಡೂ ಸರಕಾರಗಳು ಈ ಮತೀಯ ಶಕ್ತಿಗಳನ್ನು ಹತ್ತಿಕ್ಕಳು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಮಾನಸಿಕತೆಯ ಮತೀಯ ಶಕ್ತಿಗಳನ್ನು ಸರಕಾರ ಬಗ್ಗು ಬಡಿದೇ ಬಡಿಯುತ್ತೆ. ನಿನ್ನೆ ನಡೆದ ಘಟನೆಗೆ ನಾವು ಉತ್ತರ ನೀಡಲಿದ್ದೇವೆ. ಸರಕಾರದ ಭಾಗವಾಗಿ ಇಲಾಖೆಯನ್ನು ಯಾವ ರೀತಿಯಲ್ಲಿ ಚುರುಕುಗೊಳಿಸುವುದು, ಅಧಿಕಾರಿಗಳಿಗೆ ಏನು ಬಿಗಿಯಾಗಿ ಹೇಳಬೇಕಾಗಿದೆಯೋ ಅದೆಲ್ಲವನ್ನೂ ಹೇಳಲಾಗಿದೆ. ಸಾರ್ವಜನಿಕವಾಗಿ ಅಭಿಪ್ರಾಯ ಬೇರೆ ಬೇರೆಯಾಗಿ ಬರುತ್ತಿದೆ. ನಮ್ಮ ಸರಕಾರ ಸಾರ್ವಜನಿಕ ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಕಾರ್ಯಕರ್ತರು ಹಾಗೂ ಸಾರ್ವಜನಿಕ ಭಾವನೆಗಳನ್ನು ಗಮನದಲ್ಲಿರಿಸಿ ಪೊಲೀಸ್ ಇಲಾಖೆ ನಿಶ್ಚಿತ ಹೆಜ್ಜೆಗಳನ್ನು ಇಡಲಿದೆ ಎಂದು ಅವರು ತಿಳಿಸಿದ್ದಾರೆ.