ಪ್ರವೀಣ್ ಹತ್ಯೆ ಹಿಂದಿನ ಎಲ್ಲಾ ಪಿತೂರಿಗಳ ಬಗ್ಗೆ ತನಿಖೆ : ಸಂಸದ ನಳಿನ್ ಕುಮಾರ್

ಸಂಸದ ನಳಿನ್ ಕುಮಾರ್
ಮಂಗಳೂರು, ಜು.27: ಪ್ರವೀಣ್ ನೆಟ್ಟಾರು ಹತ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಇಂತಹ ಘಟನೆಗಳು ನಡೆದಾಗ ಉತ್ತರ ನೀಡುವ ಕೆಲಸ ಮಾಡಲಾಗುವುದು. ಇದರ ಹಿಂದಿನ ಎಲ್ಲಾ ಪಿತೂರಿಗಳನ್ನು, ಕೇರಳ ಮೂಲದ ಕೈವಾಡ ಇದ್ದಲ್ಲಿ ಅದನ್ನು ಕೂಡಾ ತನಿಖೆ ಮಾಡಿ ಉತ್ತರ ನೀಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸುತ್ತೇನೆ ಎಂದರು.
ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ. ಜನಸಾಮಾನ್ಯರಿಗೆ ಕಷ್ಟವಾದಾಗ ಸ್ಪಂದಿಸುತ್ತಿದ್ದರು. ಅಂತಹ ಒಬ್ಬ ಸಜ್ಜನ ಕಾರ್ಯಕರ್ತನ ಹತ್ಯೆಯಾಗಿದೆ. ಈ ಬಗ್ಗೆ ಜನಸಾಮಾನ್ಯರಲ್ಲೂ ಆಕ್ರೋಶ ಇದೆ. ಪ್ರವೀಣ್ನಂತಹ ಸಜ್ಜನರ ಹತ್ಯೆ ಆದಾಗ ನಮ್ಮಲ್ಲೂ ಆಕ್ರೋಶ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಅಸಮಾಧಾನ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ, ರಾಜೀನಾಮೆ ನೀಡುವ ಪ್ರಕ್ರಿಯೆಗೆ ಮುಂದಾಗುವುದು ಸಹಜ. ಇದಕ್ಕೆ ಉತ್ತರ ನೀಡಲಿದ್ದೇವೆ. ಇಂತಹ ಘಟನೆಗಳು ನಡೆದಾಗ ಆಕ್ರೋಶ, ಕಾರ್ಯಕರ್ತರ ನೋವು, ಭಾವನೆ ವ್ಯಕ್ತಪಡಿಸುವುದು ಸಹಜ. ಇದನ್ನು ಸರಕಾರಕ್ಕೆ ತಿಳಿಸುವ ಕೆಲಸ ಮಾಡಲಿದ್ದೇನೆ. ಆಕ್ರೋಶ ಮತ್ತು ಭಾವನೆಗಳಿಗೆ ಸರಕಾರ ಉತ್ತರ ನೀಡುವ ಭರವಸೆ ಇದೆ ಎಂದು ಅವರು ಹೇಳಿದರು.
ಇಂತಹ ಘಟನೆಗಳು ದೇಶದಲ್ಲಿ ಮತಾಂಧ ಶಕ್ತಿಗಳು ಅಶಾಂತಿ ನಿರ್ಮಾಣಕ್ಕಾಗಿ ಮಾಡುತ್ತಿವೆ. ಹತ್ಯೆಗಳ ಹಿಂದಿನ ಷಢ್ಯಂತ್ರದ ಬಗ್ಗೆ ತನಿಖೆಯಾಗಬೇಕು. ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದ ಸರಕಾರ ಕೂಡಾ ಇಂತಹ ಕೃತ್ಯವನ್ನು ಮಟ್ಟ ಹಾಕುವ ಕೆಲಸ ಮಾಡಲಿದೆ. ಈ ಘಟನೆಯ ಹಿಂದಿರುವವವರಿಗೆ ಸೂಕ್ತವಾದ ಉತ್ತರ ನೀಡುವ ಕೆಲಸ ಆಗಲಿದೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಸರಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಹೇಳಿದರು.