ಉಡುಪಿ: 5 ತಿಂಗಳ ಬಳಿಕ ಕೋವಿಡ್ಗೆ ಮೊದಲ ಬಲಿ

ಸಾಂದರ್ಭಿಕ ಚಿತ್ರ
ಉಡುಪಿ : ಜಿಲ್ಲೆಯಲ್ಲಿ ಐದು ತಿಂಗಳುಗಳ -ಮಾರ್ಚ್ 4ರ- ಬಳಿಕ ಕೋವಿಡ್-19 ಮೊದಲ ಬಲಿಯನ್ನು ಪಡೆದಿದೆ.
ಉಡುಪಿಯ 68 ವರ್ಷ ಪ್ರಾಯದ ಮಹಿಳೆಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದು, ಈ ಮೂಲಕ ಕೋವಿಡ್ಗೆ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 547 ಮಂದಿ ಅಸುನೀಗಿದಂತಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಮೃತಪಟ್ಟ 54ನೇ ವ್ಯಕ್ತಿ ಇವರಾಗಿದ್ದಾರೆ.
ಕೋವಿಡ್-19 ಗುಣಲಕ್ಷಣದೊಂದಿಗೆ ತೀವ್ರ ಉಸಿರಾಟ ತೊಂದರೆ ಹೊಂದಿದ್ದ ಇವರು, ಹೃದಯ ಕಾಯಿಲೆ, ಮಧುಮೇಹ, ರಕ್ತದೊತ್ತಡದಿಂದಲೂ ಬಳಲುತಿದ್ದು, ಜು.16ರಂದು ಖಾಸಗಿ ಆಸ್ಪತ್ರೆಗೆ ದಾಖಲಾದ ಈ ಮಹಿಳೆ ಬಹುಅಂಗ ವೈಫಲ್ಯದಿಂದ ಜು.26ರಂದು ನಿಧನ ಹೊಂದಿದರು.
ಮಂಗಳವಾರ ನಾಲ್ವರು ಕೋವಿಡ್ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 15 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ 26 ಮಂದಿ ಕೋವಿಡ್ಗೆ ಚಿಕಿತ್ಸೆಯಲ್ಲಿದ್ದಾರೆ. ಇಂದು ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೊಳಗಾದ 637 ಮಂದಿಯಲ್ಲಿ ಉಡುಪಿಯ ನಾಲ್ವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಇವರಲ್ಲಿ ಒಬ್ಬರು ಪುರುಷರಾದರೆ ಉಳಿದ ಮೂವರು ಮಹಿಳೆಯರು.
ಇಂದು ಉಡುಪಿ ತಾಲೂಕಿನ 235, ಕುಂದಾಪುರ ತಾಲೂಕಿನ 299 ಹಾಗೂ ಕಾರ್ಕಳ ತಾಲೂಕಿನ 103 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಇವರಲ್ಲಿ 10 ಮಂದಿ ತಮ್ಮ ತಮ್ಮ ಮನೆಗಳಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಪಾಸಿಟಿವ್ ಬಂದವರಲ್ಲಿ ಒಬ್ಬರು ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ ಮೂವರು ಅವರವರ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಮೂವರು ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದು, ಇವರಲ್ಲಿ ಇಬ್ಬರು ಐಸಿಯುನಲ್ಲಿದ್ದಾರೆ.
ಜಿಲ್ಲೆಯಲ್ಲಿ ಇಂದು 81 ಮಂದಿಗೆ ಮೊದಲ ಡೋಸ್, 375 ಮಂದಿಗೆ ಎರಡನೇ ಡೋಸ್ ಹಾಗೂ 4210 ಮಂದಿಗೆ ಮುನ್ನೆಚ್ಚರಿಕೆ ಡೋಸ್ಗಳು ಸೇರಿದಂತೆ ಒಟ್ಟು 4666 ಮಂದಿ ಕೋವಿಡ್ ಲಸಿಕೆ ನೀಡಲಾಗಿದೆ.