ಆ.10ರಂದು 19ವರ್ಷದೊಳಗಿನವರಿಗೆ ಜಂತುಹುಳು ನಿವಾರಣಾ ಮಾತ್ರೆ ವಿತರಣೆ: ಉಡುಪಿ ಡಿಸಿ ಕೂರ್ಮಾರಾವ್

ಉಡುಪಿ : ಆಗಸ್ಟ್ 10ರಂದು ಜಿಲ್ಲೆಯ 1ರಿಂದ 19 ವರ್ಷದೊಳಗಿನವರಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಕೋರ್ಟ್‌ಹಾಲ್‌ನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಕುರಿತು ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸಾಮಾನ್ಯವಾಗಿ ಜಂತುಹುಳುಗಳು ಮಣ್ಣಿನ ಮೂಲಕ ಜನರಿಗೆ ಹರಡುವಂತದ್ದು. ಇದರ ಸೋಂಕಿನಿಂದಾಗಿ ಮನುಷ್ಯನಲ್ಲಿ ರಕ್ತಹೀನತೆ, ಅಪೌಷ್ಠಿಕತೆ, ದುರ್ಬಲ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕಂಡುಬರುತ್ತದೆ. ಇದರ ನಿಯಂತ್ರಣಕ್ಕಾಗಿ ಸರಕಾರ 19 ವರ್ಷದೊಳಗಿನವರಿಗೆ ಉಚಿತವಾಗಿ ಜಂತುಹುಳು ನಿವಾರಣೆಗೆ ಅಲ್ಬೆಂಡೋಜೋಲ್ ಮಾತ್ರೆಯನ್ನು ವಿತರಿಸುತ್ತಿದೆ ಎಂದರು.
ಜಂತುಹುಳು ಬಾಧೆಯಿಂದ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಕುಗ್ಗಿ ಕ್ರಿಯಾಶೀಲತೆ ಕುಂಠಿತಗೊಳ್ಳುತ್ತದೆ. ವಿಶೇಷವಾಗಿ ಮಕ್ಕಳು ಜಂತುಹುಳು ಸೋಂಕಿನಿಂದ ದಣಿದಂತಾಗಿ ಅಥವಾ ಅನಾರೋಗ್ಯ ಪೀಡಿತರಾಗಿ ಶಾಲೆಗೆ ಗೈರು ಹಾಜರಾಗುವ ಸಾಧ್ಯತೆ ಅಧಿಕವಿರುತ್ತದೆ ಎಂದರು.
ಜಂತುಹುಳು ನಿವಾರಣಾ ಮಾತ್ರೆಯನ್ನು ವಿತರಿಸಲು ಅಗತ್ಯ ಪ್ರಮಾಣದ ದಾಸ್ತಾನು ಇಟ್ಟುಕೊಳ್ಳುವುದರೊಂದಿಗೆ ಅಂಗನವಾಡಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಮೂಲಕ ಅವರ ಸಮ್ಮುಖದಲ್ಲಿ ಸೇವನೆ ಮಾಡಲು ಕ್ರಮ ಕೈಗೊಳ್ಳಬೇಕು. ಸಣ್ಣ ಮಕ್ಕಳಿದ್ದಲ್ಲಿ ಅವರುಗಳಿಗೆ ಮಾತ್ರೆಯನ್ನು ಪುಡಿ ಮಾಡಿ ಸೇವನೆಗೆ ನೀಡಬೇಕು ಎಂದರು.
ಶಾಲಾ ಕಾಲೇಜುಗಳಿಂದ ಹೊರಗುಳಿದ 19 ವರ್ಷ ವಯೋಮಿತಿಯವರಿಗೆ ಅಂಗನವಾಡಿಗಳಲ್ಲಿ ಮಾತ್ರೆಗಳನ್ನು ಆಶಾ ಕಾರ್ಯಕರ್ತೆಯರ ಮೂಲಕ ಗುರುತಿಸಿ ನೀಡಬೇಕು ಎಂದ ಅವರು, ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕ ರಲ್ಲಿ ಹೆಚ್ಚಿನ ಪ್ರಚಾರಪಡಿಸಿ ಅರ್ಹ ವ್ಯಕ್ತಿಗಳು ಇದರ ಪ್ರಯೋಜನ ಪಡೆಯುವಂತೆ ಕ್ರಮ ವಹಿಸಬೇಕು ಎಂದರು.
ಒಂದೊಮ್ಮೆ ಆಗಸ್ಟ್ 10ರಂದು ಕಾರಣಾಂತರಗಳಿಂದ ಮಾತ್ರೆ ಪಡೆಯಲು ಸಾಧ್ಯಲ್ಲದವರಿಗೆ ಆಗಸ್ಟ್ 17ರಂದು ವಿತರಿಸಲು ಕ್ರಮ ತೆಗೆದುಕೊಳ್ಳಬೇಕು. ಈ ಜಂತುಹುಳು ನಿವಾರಣಾ ಕಾರ್ಯಕ್ರಮದ ಯಶಸ್ವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಹಕರಿಸಬೇಕೆಂದು ಸೂಚನೆ ನೀಡಿದರು.
ಆಗಸ್ಟ್ 1ರಿಂದ 15ರವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಗಳನ್ನು ಆರೋಗ್ಯಇಲಾಖೆಯಿಂದ ಹಮ್ಮಿಕೊಳ್ಳುವ ಜೊತೆಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ೫ ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಓಆರ್‌ಎಸ್ ಪೊಟ್ಟಣಗಳನ್ನು ನೀಡಬೇಕು. ಜೊತೆಗೆ ಅವುಗಳನ್ನು ತಯಾರಿಸುವ ವಿಧಾನವನ್ನೂ ಸಹ ತಿಳಿಸಬೇಕು ಎಂದರು.
ಸ್ವಚ್ಛತೆಯನ್ನು ಕಾಪಾಡಿದ್ದಲ್ಲಿ ಮಾತ್ರ ಅತಿಸಾರ ಭೇದಿಯಿಂದ ದೂರ ಉಳಿಯಲು ಸಾಧ್ಯ ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಕೈಗಳನ್ನು ಸ್ವಚ್ಛಗೊಳಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುವುದು ಎಂದ ಜಿಲ್ಲಾಧಿಕಾರಿ, ಪ್ರತಿಯೊಬ್ಬ ಸಾರ್ವಜನಿಕರೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಡಿಹೆಚ್‌ಓ ಡಾ.ನಾಗಭೂಷಣ ಉಡುಪ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿ ಗಳು ಉಪಸ್ಥಿತರಿದ್ದರು.