ಬೆಂಗಳೂರು: ಜು. 29ರಂದು ಗಾಳಿಪಟ ಉತ್ಸವ

ಬೆಂಗಳೂರು, ಜು. 27: ಕರ್ನಾಟಕ ಜಾನಪದ ಪರಿಷತ್ತು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ರಾಮನಗರ ಜಿಲ್ಲೆ ಇವರ ಆಶ್ರಯದಲ್ಲಿ ಜು. 29ರಂದು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ 32ನೆ ವರ್ಷದ ಗಾಳಿಪಟ ಉತ್ಸವ/ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಮತ್ತು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಉಚಿತ ಪ್ರವೇಶವಿದೆ. ಗಾಳಿಪಟ ಉತ್ಸವ-2022ಕ್ಕೆ ನಾಡಿನ ನಾನಾ ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ.
ಎಳೆಯ ಮಕ್ಕಳಿಂದ ಹಿಡಿದು ಹಿರಿಯರು, ಹಳ್ಳಿಗರು ಮತ್ತು ನಗರದವರೂ ಪಾಲ್ಗೊಳ್ಳುವ ಈ ಉತ್ಸವದಲ್ಲಿ ಗ್ರಾಮೀಣ ಮೂಲದ ಬೋರಂಟಿ, ಗುಂಡು ಚಕ್ರದಂತಹ ಪಟಗಳೊಂದಿಗೆ ಮೂಲಕ ಸಂಯೋಜನೆಯ ಸರಮಾಲೆ ಪಟ, ಎರಡು ದಾರಗಳ ಪಟಗಳಂತಹ ಪಟಗಳು ಇಲ್ಲಿ ಪಾಲ್ಗೊಳ್ಳುವುದಿದೆ. ಒಟ್ಟಿನಲ್ಲಿ ಮರೆತು ಹೋಗುತ್ತಿದ್ದ ಈ ಕಲೆ ಈಗ ಪುನಶ್ಚೇತನಗೊಂಡಿವೆ. ಅದರ ಪ್ರತೀಕ ಈ ಉತ್ಸವವಾಗಿದೆ. ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳೆಲ್ಲರೂ ಬೆಳಗ್ಗೆ 8.30ಕ್ಕೆ ಸ್ಥಳದಲ್ಲೇ ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಈ ಗಾಳಿಪಟ ಉತ್ಸವನ್ನು ರಾಮನಗರದ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ ಹಾಗೂ ಕಾರ್ಯಾಗಾರವನ್ನು ಪ್ರವಾಸೋದ್ಯಮ ಇಲಾಖೆಯ ಸಚಿವ ಆನಂದ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ. ಉತ್ಸವದ ಅಧ್ಯಕ್ಷತೆಯನ್ನು ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರು, ಶಾಸಕರು ಭಾಗವಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಗಾಳಿಪಟ ಕಲಾವಿದ ವಿ.ಕೆ.ರಾವ್ ಮತ್ತು ಇತರ ಗಾಳಿಪಟ ಕಲಾವಿದರುಗಳಿಂದ ಸುಮಾರು 50ಕ್ಕಿಂತ ಹೆಚ್ಚು ಗಾಳಿಪಟ ಹಾರಾಟ ಮತ್ತು ಪ್ರದರ್ಶನವು ಇರುತ್ತದೆ ಎಂದು ತಿಳಿಸಲಾಗಿದೆ.







