ಪ್ರವೀಣ್ ಶವ ಯಾತ್ರೆ ವೇಳೆ ಸಂಘಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿರುವುದು ಖಂಡನೀಯ: ಎಸ್ ಡಿಪಿಐ
ಬೆಂಗಳೂರು, ಜು 27: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪ್ರವೀಣ್ ಶವ ಯಾತ್ರೆಯ ಹೆಸರಿನಲ್ಲಿ ದಾಂಧಲೆ ನಡೆಸಿದ ಸಂಘಪರಿವಾರ ಕಾರ್ಯಕರ್ತರ ಕೃತ್ಯವೂ ಖಂಡನೀಯವಾಗಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದ್ದಾರೆ.
'ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಗೊಳಿಸಿರುವ ಅವರು, 'ಈ ಹಿಂದೆಯೂ ಸಂಘಪರಿವಾರ ಶವ ಯಾತ್ರೆಯ ಹೆಸರಿನಲ್ಲಿ ದುಷ್ಕೃತ್ಯ ನಡೆಸಿದ ಇತಿಹಾಸವಿದೆ.ಹಾಗಾಗಿ ಯಾವುದೇ ಕಾರಣಕ್ಕೂ ಶವ ಯಾತ್ರೆಗೆ ಅನುಮತಿ ನೀಡಬಾರದೆಂದು ಮುಂಜಾಗ್ರತವಾಗಿ ಎಸ್‌ಡಿಪಿಐ ಮೊದಲೇ ಎಚ್ಚರಿಕೆ ನೀಡಿತ್ತು.ಆದರೆ ದ.ಕ ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಇದನ್ನು ನಿರ್ಲಕ್ಷ್ಯ ವಹಿಸಿದ್ದರಿಂದ ನಿರೀಕ್ಷೆಯಂತೆ ಸಂಘಪರಿವಾರ ಕಾರ್ಯಕರ್ತರು ಶವ ಯಾತ್ರೆಯ ನಡುವೆ ಬೆಳ್ಳಾರೆ ಮಸೀದಿಗೆ,ಅಂಗಡಿಗಳಿಗೆ ಕಲ್ಲೆಸೆತ,ನಿಂತಿಕಲ್ ಎಂಬಲ್ಲಿ ಮುಸ್ಲಿಂ ಯುವಕನೋರ್ವನಿಗೆ ಥಳಿಸಿ ಇನ್ನೊಬ್ಬ ಮುಸ್ಲಿಂ ಯುವಕನ ಬೈಕ್ ನ್ನು ದ್ವಂಸಗೊಳಿಸದಲ್ಲದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ ಪುತ್ತೂರು ಹಾಗೂ ಸುಳ್ಯ ತಾಲೂಕಿನಾದ್ಯಂತ ಅರಾಜಕತೆ ಸೃಷ್ಟಿಸಿದ್ದಾರೆ. ದ.ಕ ಜಿಲ್ಲಾಡಳಿತವೇ ಈ ಘಟನೆಗೆ ನೇರ ಹೊಣೆ' ಎಂದು ಆರೋಪಿಸಿದ್ದಾರೆ.
'ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರಿನ ಪ್ರವೀಣ್ ಹತ್ಯೆ ಕೃತ್ಯವೂ ಖಂಡನೀಯವಾಗಿದೆ,ನೈಜ ಆರೋಪಿಗಳನ್ನು ಪೋಲಿಸ್ ಇಲಾಖೆ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಮಸೀದಿಗೆ,ಅಂಗಡಿಗಳಿಗೆ ಹಾಗೂ ಸರ್ಕಾರಿ ಬಸ್ ಗಳಿಗೆ ಕಲ್ಲೆಸೆದು ದಾಂದಲೆ ನಡೆಸಿದ ಸಂಘಪರಿವಾರ ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಿಸಬೇಕು' ಅವರು ಆಗ್ರಹಿಸಿದ್ದಾರೆ.
'ಪುತ್ತೂರಿನಿಂದ ಪ್ರವೀಣ್‌ನ ಮನೆಯಾದ ನೆಟ್ಟಾರಿಗೆ ತಲುಪಲು ಕುಂಬ್ರ ಮಾರ್ಗವಾಗಿ ಅತೀ ಸಮೀಪದ ರಸ್ತೆಯಾಗಿದ್ದರು ಅದನ್ನು ಬಿಟ್ಟು ಪುತ್ತೂರು-ಸವಣೂರು-ಕಾಣಿಯೂರು-ಪುಂಚತ್ತಾರು-ನಿಂತಿಕಲ್ಲು-ಬೆಳ್ಳಾರೆಯ ಸುತ್ತು ಬಳಸಿದ ಮಾರ್ಗದ ಮೂಲಕ ಶವ ಯಾತ್ರೆ ಕೈಗೊಂಡದ್ದನ್ನು ಕಾಣುವಾಗ ಇದು ಗಲಭೆ ನಡೆಸಲೆಂದೇ ಉದ್ದೇಶಪೂರ್ವಕವಾಗಿ ಸಂಘಪರಿವಾರ ವ್ಯವಸ್ಥಿತವಾಗಿ ಷಡ್ಯಂತರ ರೂಪಿಸಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ' ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಕೆಲವು ಬಿಜೆಪಿ ನಾಯಕರು ಈ ಪ್ರಕರಣದಲ್ಲಿ ಎಸ್‌ಡಿಪಿಐ ಯನ್ನು ತಳಕು ಹಾಕಿಕೊಳ್ಳುವ ಪ್ರಯತ್ನಿಸುತ್ತಿರುವುದು ಖಂಡನೀಯವಾಗಿದೆ.ಇನ್ನೂ ಕೂಡ ಪೋಲಿಸ್ ಇಲಾಖೆ ಅಧಿಕೃತವಾಗಿ ಯಾರನ್ನು ಬಂಧಿಸಿಲ್ಲ,ಹಾಗೂ ಪ್ರಾರ್ಥಮಿಕ ತನಿಖೆಯನ್ನೇ ಪೂರ್ಣ ಗೊಳಿಸಿಲ್ಲ.ಆದರೆ ಇದರ ಮಧ್ಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇಜಾವಬ್ದಾರಿ ಹೇಳಿಕೆಗಳನ್ನು ನೀಡುವುದರ ಹಿಂದೆ ಎಸ್‌ಡಿಪಿಐ ಪಕ್ಷವನ್ನು ಗುರಿ ಪಡಿಸುವ ಷಡ್ಯಂತರ ಹಾಗೂ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ಎಂದು ಸ್ಪಷ್ಟವಾಗಿ ಗೋಚರವಾಗುತ್ತದೆ. ಎಲ್ಲಿ ಗಲಭೆ ನಡೆದರು ಅದನ್ನು ಎಸ್‌ಡಿಪಿಐ ತಲೆಗೆ ಕಟ್ಟುವುದು ಬಿಜೆಪಿ ನಾಯಕರಿಗೆ ಚಾಳಿಯಾಗಿ ಬಿಟ್ಟಿದೆ,ನಂತರ ಅದರ ತನಿಖೆ ಪೂರ್ಣ ಗೊಂಡಾಗ ಸಂಘಪರಿವಾರದ ಕಾಲ ಬುಡಕ್ಕೆ ಬಂದದ್ದು ಜನರು ಮರೆತಿಲ್ಲ' ಎಂದು ತಿಳಿಸಿದ್ದಾರೆ.
ಒಂದುವರೆ ತಿಂಗಳ ಹಿಂದೆ ಬೆಳ್ಳಾರೆ ಸಮೀಪದ ಪೆರ್ಲಂಪಾಡಿಯಲ್ಲಿ ಚರಣ್‌ರಾಜ್ ಎಂಬ ಹಿಂದು ಯುವಕನನ್ನು ಹಾಗೂ ಒಂದು ವಾರದ ಹಿಂದೆ ಕಳಂಜದ ಮಸೂದ್ ಎಂಬ ತಂದೆ ಇಲ್ಲದ ಅನಾಥ ಮುಸ್ಲಿಂ ಹುಡುಗನನ್ನು ಸಂಘಪರಿವಾರ ಗೂಂಡಗಳು ಹತ್ಯೆ ನಡೆಸಿದ ಸಂದರ್ಭದಲ್ಲಿ ಮೌನ ವಹಿಸಿದ್ದ ಬಿಜೆಪಿ ನಾಯಕರು,ಶಾಸಕರು,ಸಚಿವರುಗಳು ಹಾಗೂ ಗೃಹ ಸಚಿವರು ಪ್ರವೀಣ್ ಹತ್ಯೆಯನ್ನು ವೈಭವೀಕರಿಸಿ ಪ್ರಚೋದನಕಾರಿ ಹೇಳಿಕೆ ನೀಡುವುದರ ಹಿಂದೆ ಇವರ ಕೋಮು ಮನಸ್ಥಿತಿಯನ್ನು ಹಾಗೂ ಹಿಂದು ವೋಟ್ ಬ್ಯಾಂಕ್‌ನ್ನು ಗಟ್ಟಿಗೊಳಿಸಲು ಯತ್ನಿಸುತ್ತಿರುವುದು ಕಾಣುತ್ತದೆ ಎಂದು ಅವರು ಆರೋಪಿಸಿದ್ದಾರೆ.
'ಹಾಗಾಗಿ ದ.ಕ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ತೊಡಕಾಗಿರುವ ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಹಾಗೂ ಪ್ರವೀಣ್ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಶಾಂತಿ ಸುವ್ಯವಸ್ಥೆಯನ್ನು ಖಾತ್ರಿ ಪಡಿಸಬೇಕೆಂದು ಅವರು ದ.ಕ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.