ತೀವ್ರ ಅಸ್ವಸ್ಥಗೊಂಡಿದ್ದ ಪುಟಿನ್ ಚೇತರಿಕೆ: ವರದಿ

Photo / Getty Images
ಮಾಸ್ಕೊ, ಜು.27: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶನಿವಾರ ಪಿತ್ತೋದ್ರೇಕದಿಂದ ತೀವ್ರ ಅಸ್ವಸ್ಥಗೊಂಡಿದ್ದು ತಕ್ಷಣ ವೈದ್ಯರ 2 ತಂಡ ಅಧ್ಯಕ್ಷರ ನಿವಾಸಕ್ಕೆ ಧಾವಿಸಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಹೊಟ್ಟೆ ತೊಳಸಿ ವಾಕರಿಗೆ ಬರುವ ಸಮಸ್ಯೆ ಬಿಗಡಾಯಿಸಿದಾಗ ಪುಟಿನ್ ಯೋಗಕ್ಷೇಮದ ಹೊಣೆ ಹೊತ್ತಿರುವ ಅರೆವೈದ್ಯಕೀಯ ತಂಡ ತಕ್ಷಣ ಹೆಚ್ಚುವರಿ ವೈದ್ಯರ ನೆರವು ಯಾಚಿಸಿದೆ. ಸುಮಾರು 3 ಗಂಟೆಗಳ ತುರ್ತು ವೈದ್ಯಕೀಯ ಚಿಕಿತ್ಸೆಯ ಬಳಿಕ ಪುಟಿನ್ ಚೇತರಿಸಿಕೊಂಡರು ಎಂದು ರಶ್ಯದ ಟೆಲಿಗ್ರಾಮ್ ಚಾನೆಲ್ ಜನರಲ್ ಎಸ್ವಿಆರ್ ಅನ್ನು ಉಲ್ಲೇಖಿಸಿ ‘ಇಂಡಿಪೆಂಡೆಂಟ್’ ವರದಿ ಮಾಡಿದೆ.
ಈ ಚಾನೆಲ್ ಅನ್ನು ರಶ್ಯದ ಮಾಜಿ ಗುಪ್ತಚರ ಅಧಿಕಾರಿ ನಿರ್ವಹಿಸುತ್ತಿದ್ದಾರೆ. ಉನ್ನತ ನಕಲಿ ತಂತ್ರಜ್ಞಾನ ಬಳಸಿ ಪುಟಿನ್ ಅವರ ತದ್ರೂಪಿಯನ್ನು ಸೃಷ್ಟಿಸಲಾಗಿದ್ದು ಮುಂದಿನ ದಿನಗಳಲ್ಲಿ ಪುಟಿನ್ ಬದಲು ಈ ತದ್ರೂಪಿ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಈ ಚಾನೆಲ್ ಈ ಹಿಂದೆ ಹೇಳಿತ್ತು.
ಈ ಮಧ್ಯೆ, ಉಕ್ರೇನ್ ಮೇಲೆ ರಶ್ಯ ಆಕ್ರಮಣ ನಡೆಸಿದಂದಿನಿಂದ ಪುಟಿನ್ ಟರ್ಮಿನಲ್ ಕ್ಯಾನ್ಸರ್ ಅಥವಾ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಊಹಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಪುಟಿನ್ ಅವರ ತಲೆ ನಡುಗುತ್ತಿರುವುದು ಮತ್ತು ಕಾಲಿನ ಮೇಲೆ ಹೆಚ್ಚು ಭಾರ ಹಾಕಲಾಗದೆ ಅವರು ಚಡಪಡಿಸುತ್ತಿರುವುದನ್ನು ಸ್ಪಷ್ಟವಾಗಿ ಗಮನಿಸಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ಆದರೆ ಪುಟಿನ್ ಅವರ ಕಚೇರಿ ಈ ವರದಿಯನ್ನು ತಿರಸ್ಕರಿಸಿವೆ. ಅಧ್ಯಕ್ಷ ಪುಟಿನ್ ಆರೋಗ್ಯವಾಗಿದ್ದಾರೆ. ನಕಲಿ ಸುದ್ಧಿ ಸೃಷ್ಟಿಸುವುದರಲ್ಲಿ ಸಿದ್ಧಹಸ್ತರಾದ ಉಕ್ರೇನ್, ಅಮೆರಿಕ ಮತ್ತು ಬ್ರಿಟನ್ನ ಅಧಿಕಾರಿಗಳ ಕುತಂತ್ರ ಇದು. ಇವೆಲ್ಲಾ ವದಂತಿಗಳಲ್ಲಿ ಹುರುಳಿಲ್ಲ ಎಂದು ಪುಟಿನ್ ಕಚೇರಿಯ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.







