ಭಾರತದ 'ಬಾಡಿಗೆ ಆಧಾರಿತ' ಹಿಂದುತ್ವ ಸರಕಾರ

ಅತ್ಯಧಿಕ ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಕುಸಿಯುತ್ತಿರುವ ರೂಪಾಯಿ ವೌಲ್ಯ- ಇವು ಭಾರತೀಯ ಆರ್ಥಿಕತೆ ಇಂದು ಎದುರಿಸುತ್ತಿರುವ ಮೂರು ಮೂಲಭೂತ ಸಮಸ್ಯೆಗಳು. ಶಿಕ್ಷಣ ಮತ್ತು ಆರೋಗ್ಯ ಮೂಲಸೌಕರ್ಯಗಳು ಕುಸಿದು ಬೀಳುತ್ತಿವೆ. ಮಾನವ ಅಭಿವೃದ್ಧಿಯು ಪಾತಾಳದಲ್ಲಿದೆ. ಭಾರತೀಯ ಆರ್ಥಿಕತೆಯನ್ನು ಈ ಬಿಕ್ಕಟ್ಟುಗಳಿಂದ ಹೊರಗೆ ಒಯ್ಯಲು ಮೋದಿ ಸರಕಾರದ ಬಳಿ ಯಾವುದೇ ಯೋಜನೆಯಿಲ್ಲ. ಆಗ ಅದು ತನ್ನ ವೈಫಲ್ಯವನ್ನು ಭಾರತೀಯ ಜನತೆಯ ಮೇಲೆ ರವಾನಿಸುತ್ತಾ, ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ)ಯನ್ನು ಬೇಕಾಬಿಟ್ಟಿಯಾಗಿ ಹೆಚ್ಚಿಸಿದೆ.
ಕೇಂದ್ರ ಸರಕಾರದ ಈ ಕ್ರಮವು ಬಡವರು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರು, ಸಣ್ಣ ಉದ್ಯಮಗಳು ಮತ್ತು ಗ್ರಾಮೀಣ ಬಡವರ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಲಿದೆ. ಸರಕಾರದ ಇಂತಹ ನೀತಿಯು ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರ ಲಾಭ ಮಾಡಿಕೊಡಲಿದೆ. ಆದರೆ ಬಡವರನ್ನು ಹಸಿವೆ, ಅಪೌಷ್ಟಿಕತೆ ಮತ್ತು ಆಹಾರ ಅಭದ್ರತೆಯತ್ತ ನೂಕಲಿದೆ.
ಹಿಂದುತ್ವವು ಭಾರತವನ್ನು ಬಾಡಿಗೆ ಆಧಾರಿತ ಮಾರುಕಟ್ಟೆ ಸೊಸೈಟಿ -rent seeking market society - ಜನರ ಪರವಾಗಿ ಕೆಲಸವನ್ನೇ ಮಾಡದೆ ಗರಿಷ್ಠ ಪ್ರತಿಫಲ ಪಡೆಯಲು ಯತ್ನಿಸುವ ಆಡಳಿತ ವ್ಯವಸ್ಥೆ)ಯನ್ನಾಗಿ ಮಾಡಿದೆ. ಇಂತಹ ವ್ಯವಸ್ಥೆಯಲ್ಲಿ ಅಭಿವೃದ್ಧಿಹೀನತೆ ಮತ್ತು ಸಾಮಾಜಿಕ ನಷ್ಟ ಅಂತರ್ಗತವಾಗಿಯೇ ಇವೆ. ಜಿಎಸ್‌ಟಿಯಲ್ಲಿನ ಏರಿಕೆಯು ಎಲ್ಲಾ ಭಾರತೀಯರು ಮತ್ತು ಭಾರತೀಯ ಆರ್ಥಿಕತೆಯ ಎಲ್ಲ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ. ಸಣ್ಣ ಉತ್ಪಾದಕರು, ಸಣ್ಣ ಉದ್ಯಮಗಳು ಮತ್ತು ಬಡ ಬಳಕೆದಾರರ ಮೇಲೆ ತೆರಿಗೆ ವಿಧಿಸುವುದು, ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಕಲ್ಪನೆಗೆ ವಿರುದ್ಧವಾಗಿದೆ. ಯಾಕೆಂದರೆ, ಅದು ಉತ್ಪಾದಕತೆ ಕುಸಿತ, ಆರ್ಥಿಕ ಸ್ಥಾಗಿತ್ಯ ಮತ್ತು ಅದಕ್ಷತೆಗೆ ಪೂರಕವಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.
''ಒಂದು ದೇಶ, ಒಂದು ತೆರಿಗೆ ಮತ್ತು ಒಂದು ಮಾರುಕಟ್ಟೆ'' ಎಂಬ ಪ್ರಧಾನಿ ನರೇಂದ್ರ ಮೋದಿಯ ಘೋಷಿತ ನೀತಿಯು ಭಾರತದ ಆರ್ಥಿಕ ವೈವಿಧ್ಯತೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಸ್ಥಳೀಯ ಉತ್ಪಾದನೆ ಮತ್ತು ಬಳಕೆ ಸಂಸ್ಕೃತಿಗೆ ಈ ನೀತಿಯಲ್ಲಿ ಅವಕಾಶವಿಲ್ಲ. ''ಒಂದು ದೇಶ, ಒಂದು ತೆರಿಗೆ ಮತ್ತು ಒಂದು ಮಾರುಕಟ್ಟೆ'' ನೀತಿಯು, ಹಿಂದುತ್ವದೊಂದಿಗೆ ನಂಟು ಹೊಂದಿರುವ ಕೆಲವೇ ಕೆಲವು ಬಂಡವಾಳಶಾಹಿಗಳು ತಮ್ಮ ಪ್ರಾಬಲ್ಯ ವೃದ್ಧಿಸುವುದಕ್ಕೆ ಪೂರಕವಾದ ಪರಿಸ್ಥಿತಿಗಳನ್ನು ನಿರ್ಮಿಸುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿರುವ ಬಾಡಿಗೆ ಆಧಾರಿತ ಅರ್ಥವ್ಯವಸ್ಥೆಯ ಅನುಭವದಿಂದ ಹೇಳುವುದಾದರೆ, ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಸಾಮಾಜಿಕವಾಗಿ ಉಪಯುಕ್ತವಾಗುವ ಯಾವುದೇ ವಸ್ತುಗಳನ್ನು ಉತ್ಪಾದಿಸದೆಯೇ ಅಥವಾ ಸೇವೆಗಳನ್ನು ನೀಡದೆಯೇ ಸಂಪತ್ತಿನ ಬೃಹತ್ ಪಾಲನ್ನು ಕಸಿದುಕೊಳ್ಳುತ್ತವೆ. ಆದಾಯ ಅಸಮಾನತೆಯು ಬಾಡಿಗೆ ಆಧಾರಿತ ಮಾರುಕಟ್ಟೆ ಸೊಸೈಟಿಯ ಪರಿಣಾಮವಾಗಿದೆ. ಈ ವ್ಯವಸ್ಥೆಯಲ್ಲಿ ಶ್ರೀಮಂತ ತೆರಿಗೆ ಪಾವತಿದಾರರು ಲಾಭ ಮಾಡಿಕೊಳ್ಳುತ್ತಾರೆ. ಅದು ಅಗಾಧ ಸಂಖ್ಯೆಯ ಬಡವರನ್ನು ಕಡೆಗಣಿಸುತ್ತದೆ. ರಾಜಕೀಯದ ಮೇಲೆ ಹಿಂದುತ್ವ ಎಂಬ ಕೇಂದ್ರೀಕೃತ ಯೋಜನೆಯ ಪ್ರಾಬಲ್ಯ ಮತ್ತು ಭಾರತೀಯ ಆರ್ಥಿಕತೆಯ ಮೇಲೆ ಕಾರ್ಪೊರೇಟ್ ಸಂಸ್ಥೆಗಳ ಪ್ರಾಬಲ್ಯವು ಜನರ ಎಲ್ಲ ಸೃಜನಾತ್ಮಕ ಸಾಮರ್ಥ್ಯಗಳನ್ನು ಮತ್ತು ಕಾರ್ಮಿಕ ಶಕ್ತಿಯನ್ನು ಅದುಮುತ್ತದೆ. ಅಂದರೆ ಜನರ ಜೀವನೋಪಾಯಗಳು, ಉತ್ಪಾದಕತೆ ಸಾಮರ್ಥ್ಯ, ಹೊಸತನ ಮತ್ತು ಆದಾಯ ಗಳಿಕೆಯ ಇತರ ಸಾಮರ್ಥ್ಯಗಳನ್ನು ಹತ್ತಿಕ್ಕಲಾಗುತ್ತದೆ. ಹಿಂದುತ್ವ ಎನ್ನುವುದು ಮೂಲತಃ ಭಾರತದ ಮೇಲ್ವರ್ಗ ಮತ್ತು ಮೇಲ್ಜಾತಿ ಜನರ ಆರ್ಥಿಕ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ಸಾಂಸ್ಕೃತಿಕ ಯೋಜನೆಯಾಗಿದೆ.
ನರೇಂದ್ರ ಮೋದಿ ನೇತೃತ್ವದ ಹಿಂದುತ್ವ ಸರಕಾರ ಮತ್ತು ಅವರ ಪಕ್ಷ ಬಿಜೆಪಿಯು ತನಗೆ ಆಪ್ತವಾಗಿರುವ ಬಂಡವಾಳಶಾಹಿ ವರ್ಗಗಳ ಉನ್ನತಿಗಾಗಿ ಕೆಲಸ ಮಾಡುವುದಕ್ಕಾಗಿ ಚುನಾವಣೆಗಳಲ್ಲಿ ವಿಜಯವನ್ನು ಕೋರುತ್ತದೆ. ಬಿಜೆಪಿ ಸರಕಾರಕ್ಕೆ ಜನರು ಮತ್ತು ದೇಶದ ಬಗ್ಗೆ ಕಾಳಜಿಯಿಲ್ಲ. ಸಾಂಸ್ಕೃತಿಕ ರಾಷ್ಟ್ರೀಯತೆಯ ಹೆಸರಿನಲ್ಲಿ ಅದು ಧರ್ಮದ ಆಧಾರದಲ್ಲಿ ಜನರನ್ನು ಒಗ್ಗೂಡಿಸುತ್ತದೆ ಮತ್ತು ಭಾರತೀಯರ ಜೀವಗಳು ಮತ್ತು ಜೀವನೋಪಾಯಗಳನ್ನು ಬಲಿಗೊಟ್ಟು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತದೆ. ಮಾರುಕಟ್ಟೆ ಕೇಂದ್ರಿತ ಹಿಂದುತ್ವ ಆರ್ಥಿಕತೆಯು ಜನ ಸಾಮಾನ್ಯರಿಗೆ ತೆರಿಗೆ ವಿಧಿಸುವ ಆರ್ಥಿಕತೆ ಮತ್ತು ಬಾಡಿಗೆ ಆಧಾರಿತ ಮಾರುಕಟ್ಟೆ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಅದು ಸರ್ವರ ಕಲ್ಯಾಣದ ಉದ್ದೇಶದ ಸರಕಾರದಿಂದ ಹಿಂದೆ ಸರಿದು ಕಾರ್ಪೊರೇಟ್ ಮಾದರಿಯ ಭದ್ರತಾ ಸರಕಾರವನ್ನು ಸೃಷ್ಟಿಸುತ್ತದೆ. ಬಾಡಿಗೆ ಆಧಾರಿತ ಮಾರುಕಟ್ಟೆ ಸೊಸೈಟಿಯು ಲಂಚ, ಭ್ರಷ್ಟಾಚಾರ, ಕಳ್ಳಸಾಗಾಣೆ ಮತ್ತು ಕಾಳ ಮಾರುಕಟ್ಟೆ ವ್ಯವಸ್ಥೆಯನ್ನು ಪೋಷಿಸುತ್ತದೆ. ಭಾರತದಂಥ ಅಭಿವೃದ್ಧಿಶೀಲ ದೇಶದಲ್ಲಿ ಈ ವ್ಯವಸ್ಥೆಯು ಬೃಹತ್ ಕಂದಾಯ ನಷ್ಟಕ್ಕೆ ಪೂರಕವಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಹಿಂದುತ್ವ ನೇತೃತ್ವದ ಬಾಡಿಗೆ ಆಧಾರಿತ ಸರಕಾರವು, ಜನಸಾಮಾನ್ಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಅಥವಾ ಹೊಸತನ ಮತ್ತು ಆರ್ಥಿಕ ಬೆಳವಣಿಗೆಯನ್ನು ವಿಸ್ತರಿಸುವ ಮೂಲಕ ನೂತನ ಸಂಪತ್ತು ಸೃಷ್ಟಿಸುವಲ್ಲಿ ವಿಫಲವಾಗಿರುವುದು ಎಲ್ಲರಿಗೂ ಗೊತ್ತಿದೆ.
ಹಿಂದೂ ರಾಷ್ಟ್ರೀಯತೆ, ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆ ಮುಂತಾದ ಹಿಂದುತ್ವದ ಕಲ್ಪನೆಗಳು ಹಾಗೂ 'ಭಾರತ ಮೊದಲು' ಎಂಬ ಯೋಜನೆಗಳು, ಭಾರತದಲ್ಲಿ ಸಾಂವಿಧಾನಿಕ ಪ್ರಜಾಪ್ರಭುತ್ವ ಮತ್ತು ಪೌರತ್ವ ಹಕ್ಕುಗಳ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ, ಜನಾಂಗೀಯ ಹತ್ಯೆಯತ್ತ ಇಡುವ ಹೆಜ್ಜೆಗಳಾಗಿವೆ. ಹಿಂದುತ್ವವೆಂಬ ಕೇಂದ್ರೀಕೃತ ಆರ್ಥಿಕ ಯೋಜನೆಯು, ಉತ್ಪಾದನೆ ಮತ್ತು ಬಳಕೆಗೆ ಪರ್ಯಾಯವಾದ ಪ್ರಾಬಲ್ಯದ ರಾಜಕಾರಣವಾಗಿದೆ. ಜಿಎಸ್‌ಟಿಯಲ್ಲಿನ ಏರಿಕೆ ಮತ್ತು ಇತರ ಮಾದರಿಯ ತೆರಿಗೆಗಳು ಈ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆಯಾಗಿದೆ. ಅದು ಭಾರತವನ್ನು ಬಾಡಿಗೆ ಆಧಾರಿತ ಮಾರುಕಟ್ಟೆ ಸೊಸೈಟಿಯನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ.
ಭಾರತದಲ್ಲಿ ತುಳಿತಕ್ಕೊಳಗಾಗಿರುವ ಜನಸಮೂಹದ ಜೀವನೋಪಾಯದ ಭದ್ರತೆ ಮತ್ತು ಸಂರಕ್ಷಣೆಗಾಗಿ ಹಿಂದುತ್ವದ ಮಾರುಕಟ್ಟೆ ಕೇಂದ್ರಿತ ಆರ್ಥಿಕತೆ ಮತ್ತು ಅದರ ಪ್ರಾಬಲ್ಯದ ರಾಜಕೀಯ ಕೊನೆಗೊಳ್ಳಬೇಕಾಗಿದೆ. ಅಭಿವೃದ್ಧಿ, ಶಾಂತಿ ಮತ್ತು ಸಮೃದ್ಧಿಯ ಕಲ್ಪನೆಗಳು ಹಿಂದುತ್ವದ ರಾಜಕೀಯಕ್ಕೆ ಅಪಥ್ಯವಾಗಿವೆ. ಹಾಗಾಗಿ, ಆಹಾರ ಮತ್ತು ಇತರ ಅಗತ್ಯ ವಸ್ತುಗಳು ಮತ್ತು ಸೇವೆಗಳ ಮೇಲಿನ ಜಿಎಸ್‌ಟಿ ಹೆಚ್ಚಳವು ಅವರ ಮಾನವ ಭಾವನೆಗಳಿಗಾಗಲಿ, ಸೈದ್ಧಾಂತಿಕ ರಾಜಕೀಯದ ಮೇಲಾಗಲಿ ಘಾಸಿ ಮಾಡುವುದಿಲ್ಲ. ಅವರ ಆರ್ಥಿಕ ನೀತಿಗಳು ತಮ್ಮ ಕಾರ್ಪೊರೇಟ್ ಗೆಳೆಯರಿಗೆ ತಕ್ಷಣ ಲಾಭ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಈ ಕಾರ್ಪೊರೇಟ್ ಗೆಳೆಯರು ಚುನಾವಣೆಗಳಲ್ಲಿ ಅವರ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಆರೆಸ್ಸೆಸ್ ಎಂಬ ದ್ವೇಷ ಉತ್ಪಾದಕ ಕಾರ್ಖಾನೆಯ ಚಟುವಟಿಕೆಗಳಿಗೆ ಹಣ ಪೂರೈಸುತ್ತಾರೆ.
ಕೆಲವೇ ಕಾರ್ಪೊರೇಟ್ ಕಂಪೆನಿಗಳು ಪ್ರತಿಗಾಮಿ ಹಿಂದುತ್ವ ರಾಜಕಾರಣದ ಜೊತೆ ಸೇರಿಕೊಂಡು ಸೃಷ್ಟಿಸಿರುವ ಬಾಡಿಗೆ ಆಧಾರಿತ ಮಾರುಕಟ್ಟೆ ಸೊಸೈಟಿಯು, ಭಾರತ ಮತ್ತು ಭಾರತೀಯರನ್ನು ಅನಂತ ಕತ್ತಲೆಗೆ ತಳ್ಳಿದೆ. ಸೆಕ್ಯುರಿಟಿ ಆಧಾರಿತ ಕಾರ್ಪೊರೇಟ್ ಪ್ರಭುತ್ವಗಳು ಮತ್ತು ಸರಕಾರಗಳು ತಮ್ಮ ನಾಗರಿಕರ ಕಲ್ಯಾಣಕ್ಕಾಗಿ ಯಾವತ್ತೂ ಕೆಲಸ ಮಾಡಿಲ್ಲ. ಅದು ಹಿಂದುತ್ವ ಸರಕಾರದ ಅಡಿಯಲ್ಲಿ ಭಾರತದಲ್ಲಿಯೂ ಹಾಗೆ ಮಾಡುವುದಿಲ್ಲ. ಭಾರತ ಮತ್ತು ಭಾರತೀಯರ ಅಭಿವೃದ್ಧಿ, ಸಮೃದ್ಧಿ ಮತ್ತು ಶಾಂತಿಗೆ ಹಿಂದುತ್ವದ ಸೋಲು ಅತ್ಯಂತ ಮುಖ್ಯವಾಗಿದೆ.
ಕೃಪೆ: countercurrents.org







