ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ; ರಾಜ್ಯಾದ್ಯಂತ ಕಟ್ಟೆಚ್ಚರ: ಎಡಿಜಿಪಿ ಅಲೋಕ್ ಕುಮಾರ್

ಎಡಿಜಿಪಿ ಅಲೋಕ್ ಕುಮಾರ್
ಮಂಗಳೂರು, ಜು. 28: ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಮಾತ್ರವಲ್ಲ, ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ್ಯಾಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮುಖ್ಯಮಂತ್ರಿ ಮೇಲುಸ್ತುವಾರಿಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ರಾಜ್ಯ ಸರಕಾರ ಮತ್ತು ಇಲಾಖೆ ಒಂದಾಗಿ ಪ್ರಕರಣ ಪತ್ತೆ ಹಚ್ಚುವಲ್ಲಿ ನಿರತವಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ನಿನ್ನೆಯಿಂದ ದ.ಕ. ಜಿಲ್ಲೆಯಲ್ಲಿದ್ದು, ಪ್ರಕರಣದ ತನಿಖೆಗೆ ಪೊಲೀಸರಿಗೆ ಮಾರ್ಗದರ್ಶನ ನೀಡುತ್ತಿರುವ ಎಡಿಜಿಪಿ ಅಲೋಕ್ ಕುಮಾರ್ ಅವರನ್ನು ‘ವಾರ್ತಾಭಾರತಿ’ ಪ್ರತಿನಿಧಿ ಇಂದು ಮಾತನಾಡಿಸಿದಾಗ ಈ ಪ್ರತಿಕ್ರಿಯೆ ನೀಡಿದರು.
ಸಾಮಾನ್ಯ ವ್ಯಕ್ತಿ, ಮಾತ್ರವಲ್ಲ ಪಕ್ಷವೊಂದರ ಸಾಮಾನ್ಯ ಕಾರ್ಯಕರ್ತನೊಬ್ಬನ ಹತ್ಯೆಯಾಗಿರುವುದು ವಿಷಾದನೀಯ. ಹಾಗಾಗಿ ದುಷ್ಕರ್ಮಿಗಳನ್ನು ಆದಷ್ಟು ಶೀಘ್ರವಾಗಿ ಬಂಧಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರು ಆರೋಪಿಗಳ ಶೀಘ್ರ ಬಂಧನದ ನಿಟ್ಟಿನಲ್ಲಿ ಎದುರು ನೋಡುತ್ತಿದ್ದಾರೆ. ಅದಕ್ಕಾಗಿ ಎಲ್ಲಾ ಆಯಾಮಗಳಲ್ಲೂ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಕರ್ನಾಟಕ ರಾಜ್ಯ ಪೊಲೀಸರು ಒಂದು ತಂಡವಾಗಿ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ನಿರಂತರ ಸಂಪರ್ಕದಲ್ಲಿದ್ದು, ತನಿಖೆಯ ಬಗ್ಗೆ ಮಾಹಿತಿಯನ್ನು ಅವರಿಗೆ ನೀಡಲಾಗುತ್ತಿದೆ ಎಂದರು.
ಮಸೂದ್ ಎಂಬವರ ಕೊಲೆಯಾದ ಸಂದರ್ಭದಲ್ಲಿಯೂ ದ.ಕ. ಜಿಲ್ಲೆಯ ಪೊಲೀಸರು ಆರೋಪಿಗಳನ್ನು ಒಂದು ದಿನದ ಅವಧಿಯಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆ ಕೊಲೆಯ ತನಿಖೆಯಲ್ಲಿ ಕಂಡುಬಂದಂತೆ ಅದೊಂದು ಪೂರ್ವ ನಿಯೋಜಿತ ಕೊಲೆಯಾಗಿರಲಿಲ್ಲ. ಆರೋಪಿಗಳು ಆ ಕೊಲೆ ಘಟನೆಯಿಂದ ದಿಗಿಲುಗೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಅತೀ ಶೀಘ್ರದಲ್ಲೇ ಬಂಧಿಸಲು ಸಹಕಾರಿಯಾಯಿತು. ಆದರೆ ಈ ಪ್ರಕರಣವನ್ನು ಅವಲೋಕಿಸಿದಾಗ ಇದೊಂದು ಪೂರ್ವ ನಿಯೋಜಿತ ಕೊಲೆಯೆಂಬಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತನಿಖೆಯು ವಿವಿಧ ಆಯಾಮಗಳಲ್ಲಿ ನಡೆಯುತ್ತಿದ್ದು, ಶೀಘ್ರವೇ ಆರೋಪಿಗಳ ಬಂಧನವಾಗುವ ನಿರೀಕ್ಷೆ ಇದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ದ.ಕ. ಜಿಲ್ಲೆಯಲ್ಲಿ ಹಿಂದಿನಿಂದಲೂ ಒಂದು ಸಮುದಾಯದವರ ಯಾರದ್ದಾದರೂ ಹತ್ಯೆಯಾದಾಕ್ಷಣ ಇನ್ನೊಂದು ಸಮುದಾಯದವರ ಕೃತ್ಯವೆಂಬ ಗುಮಾನಿ ಸಮಾಜದಲ್ಲಿ ಮೂಡುವುದು ಸಹಜ. ಹಾಗಾಗಿ ಕೆಲ ದಿನಗಳ ಹಿಂದೆ ಸುಳ್ಯದಲ್ಲಿ ನಡೆದ ಕೊಲೆ ಪ್ರಕರಣ ಹಾಗೂ ಇದಕ್ಕೂ ಏನಾದರೂ ಸಂಬಂಧ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ನಡುವೆ ರಾಜಸ್ತಾನದಲ್ಲಿ ಟೈಲರ್ ಕನ್ನಯ್ಯಲಾಲ್ ಹತ್ಯೆ ಕುರಿತು ಹತ್ಯೆಗೀಡಾದ ಪ್ರವೀಣ್ ತಮ್ಮ ಫೇಸ್ಬುಕ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು ಎಂಬುದನ್ನೂ ಕೆಲವರು ಗಮನಕ್ಕೆ ತಂದಿದ್ದಾರೆ. ಈ ಆಯಾಮದಲ್ಲಿ ತನಿಖೆ ನಡೆಯುತ್ತಿದೆ. ತನಿಖಾಧಿಕಾರಿಯಾಗಿ ನಾವು ಯಾವುದೇ ಒಂದು ದೂರದ ಅಂಶವನ್ನು ಕೂಡಾ ಕಡೆಗಣಿಸುವಂತಿಲ್ಲ. ಈ ಎಲ್ಲಾ ವಿಚಾರಗಳ ಕುರಿತಂತೆಯೂ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಸೂದ್ ಕೊಲೆ ನಡೆದ ಸಂದರ್ಭದಲ್ಲಿಯೇ ಮತ್ತೊಂದು ಪ್ರತೀಕಾರದ ಕೊಲೆ ನಡೆಯಬಹುದೆಂಬ ಸುಳಿವು ಇದ್ದರೂ ಗುಪ್ತಚರ ಇಲಾಖೆ ಇದನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂಬ ಆಕ್ಷೇಪ ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಎಡಿಜಿಪಿ ಅಲೋಕ್ ಕುಮಾರ್, ಪೊಲೀಸ್ ಇಲಾಖೆಗೂ ಇಂತಹ ಗುಮಾನಿ ಇತ್ತು. ಮಸೂದ್ ಕೊಲೆ ಪ್ರಕರಣದ ಸಂದರ್ಭ ದ.ಕ. ಜಿಲ್ಲಾ ಪೊಲೀಸರು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಆರೋಪಿಗಳು ಯಾವುದೇ ಸಂಘಟನೆಗೆ ಸೇರಿದ್ದವರಾಗಿದ್ದರೂ ಯಾರೊಬ್ಬರನ್ನೂ ಬಿಡದೆ 24 ಗಂಟೆಯಲ್ಲಿಯೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗಾಗಿ ಕಾನೂನು ಪ್ರಕಾರ ಪೊಲೀಸರು ನಡೆದುಕೊಂಡು ಆರೋಪಿಗಳನ್ನು ಬಂಧಿಸಿದ್ದರಿಂದ ಮತ್ತೆ ದುಷ್ಕರ್ಮಿಗಳು ಕಾನೂನು ಕೈಗೆತ್ತಿಕೊಳ್ಳುವುದೆಂದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಈ ಕೊಲೆ ಪ್ರಕರಣ ಪೊಲೀಸರನ್ನು ಸಾಕಷ್ಟು ಒತ್ತಡಕ್ಕೆ ಸಿಲುಕಿಸಿದೆ. ಹಾಗಿದ್ದರೂ ಘಟನೆ ಸಂಭವಿಸಿದಾಗಿನಿಂದ ಪೊಲೀಸರು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಘಟನೆಗಳು ನಡೆದಾಗ ಕೇವಲ ಘಟನಾ ಸ್ಥಳದಲ್ಲಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಖಾತರಿಪಡಿಸಬೇಕಾದ ಜವಾಬ್ಧಾರಿ ಇಲಾಖೆಯದ್ದಾಗಿರುತ್ತದೆ. ಅಧಿಕಾರಿಗಳನ್ನು ಒಳಗೊಂಡು ಪೊಲೀಸರು ನಿದ್ದೆಯಿಲ್ಲದೆ ಒತ್ತಡದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಾರೆ. ನಿನ್ನೆ ಬೆಳ್ಳಾರೆಯಲ್ಲಿ ಪ್ರವೀಣ ಅಂತಿಮ ಯಾತ್ರೆಯ ವೇಳೆ ಸಾಕಷ್ಟು ಜನ ಸಮೂಹದ ಜತೆಗೆ ಪಕ್ಷದ ರಾಜ್ಯಾಧ್ಯಕ್ಷರು, ಜನಪ್ರತಿನಿಧಿಗಳು ಇರುವಾಗ ಭದ್ರತೆಯ ಹೊಣೆಯೂ ಅವರ ಮೇಲಿರುತ್ತದೆ. ಅಲ್ಲಿ ಸಹಜವಾಗಿಯೇ ಅಂತಿಮ ಯಾತ್ರೆಯಲ್ಲಿದ್ದ ಕಾರ್ಯಕರ್ತರ ಆಕ್ರೋಶ, ಭಾವನೆಗಳು ಭುಗಿಲೇಳುವುದು ಕೂಡಾ ಸಹಜ. ಅಂತಹ ಪರಿಸ್ಥಿತಿಯಲ್ಲಿ ಅಲ್ಲಿದ್ದ ಕನಿಷ್ಠ ಸಂಖ್ಯೆಯ ಪೊಲೀಸರು ನಿಯಂತ್ರಿಸುವಲ್ಲಿ ತಮ್ಮ ಪ್ರಯತ್ನ ಮಾಡಿದ್ದಾರೆ. ಅಲ್ಲಿ ಸೇರಿದ್ದ ಜನ ಸಮೂಹ ಜನಪ್ರತಿನಿಧಿಗಳ ವಾಹನ ತಡೆದು ಪಂಕ್ಚರ್ ಮಾಡಿ ಅದನ್ನು ಬೀಳಿಸುವ ಯತ್ನ ನಡೆದಿದೆ. ಇದೇ ಸಮಯದಲ್ಲಿ ಅಲ್ಲಿ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಪೊಲೀಸರ ನಡೆಯ ಬಗ್ಗೆ ವೀಡಿಯೋ ವೈರಲ್ ಆಗಿದೆ. ಅಂತಹ ಘಟನೆ ಆಗಬಾರದಿತ್ತು. ಆದರೆ ಆಕ್ರೋಶಭರಿತ ಜನ ಸಮೂಹವನ್ನು ನಿಯಂತ್ರಿಸುವಾಗ ಆದ ಘಟನೆ ಇದಾಗಿದೆ. ಆದರೆ ಇಡೀ ಘಟನೆಯನ್ನು ಅವಲೋಕಿಸಿದಾಗ ಪೊಲೀಸರು ಅತ್ಯಂತ ಕ್ಷಿಪ್ರವಾಗಿ ಆಕ್ರೋಶಿತ ಜನಸಮುದಾಯವನ್ನು ನಿಯಂತ್ರಿಸಿ ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯಿಸಿದರು.
"ನಗರದ ಬಲ್ಮಠದ ಪಬ್ ದಾಳಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸ್ವಯಂ ಪ್ರೇರಿತವಾಗಿ ಅಪರಾಧ ದಂಡ ಪ್ರಕ್ರಿಯೆಯಡಿ (ಸಿಆರ್ಪಿಸಿ) ಸೆಕ್ಷನ್ 107ರಂತೆ ಪ್ರಕ್ರಿಯೆ ಕೈಗೊಂಡಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳಿಗೆ ಯಾವುದೇ ಖಾಸಗಿ ಸಂಸ್ಥೆಯೊಳಗೆ ಅಕ್ರಮ ಪ್ರವೇಶ ಮಾಡಿ ಪ್ರಶ್ನಿಸುವ ಅಧಿಕಾರ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಸಂಸ್ಥೆಯ ಮೇಲೆ ದಾಳಿ ಅಥವಾ ಅಲ್ಲಿ ಯಾವುದೇ ಹಾನಿಯಾಗಿದ್ದಲ್ಲಿ ಸಂಬಂಧಪಟ್ಟವರು ದೂರು ನೀಡಿದರೆ ಆ ನಿಟ್ಟಿನಲ್ಲಿ ಪೊಲೀಸರು ಕ್ರಮ ವಹಿಸುತ್ತಾರೆ. ಆದರೆ ಇತ್ತೀಚೆಗೆ ಬಲ್ಮಠದ ಪಬ್ ದಾಳಿಗೆ ಸಂಬಂಧಿಸಿ ಸಂಬಂಧಪಟ್ಟ ಯಾರಿಂದಲೂ ದೂರು ದಾಖಲಾಗಿಲ್ಲ. ಹಾಗಿದ್ದರೂ ಸ್ವಯಂ ಪ್ರೇರಿತವಾಗಿ ಮಂಗಳೂರು ಪೊಲೀಸರು ಸೆಕ್ಷನ್ 107ರಡಿ ಅಲ್ಲಿ ತೆರಳಿದ್ದವರ ವಿರುದ್ಧ ಕ್ರಮ ವಹಿಸಿದ್ದಾರೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.