ದ.ಕ. ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣ ಕೋಮು ದ್ವೇಷದ ಹತ್ಯೆಗೆ ಕಾರಣ: ರಮಾನಾಥ ರೈ

ಮಂಗಳೂರು, ಜು.28: ಕೆಲವು ರಾಜಕೀಯ ಮುಖಂಡರ ಕೋಮು ದ್ವೇಷದ ಪ್ರಚೋದನಾಕಾರಿ ಭಾಷಣಗಳು ದ.ಕ. ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಿದೆ ಮತ್ತು ಅಮಾಯಕರ ಕೊಲೆಗೂ ಕಾರಣವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ರೀತಿಯ ಪ್ರಚೋದನಕಾರಿ ಭಾಷಣ ಮಾಡುವವರು ಗಲಭೆಗಳ ಹಿಂದೆ ಇರುತ್ತಾರೆ. ಆದರೆ ಇಂತಹ ಪ್ರಕರಣ ನಡೆದಾಗ ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರು, ಕೆಲವು ಅಮಾಯಕರು ಬಲಿಯಾಗುವುದು, ಜೈಲು ಸೇರುವುದು ನಡೆಯುತ್ತಿದೆ.
ಸುಳ್ಯದಲ್ಲಿ ನಡೆದ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿರುವುದು ಕಂಡು ಬರುತ್ತದೆ. ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಚುನಾವಣೆ ಹತ್ತಿರ ವಾಗುತ್ತಿರುವಂತೆ ಈ ಹತ್ಯೆಗಳು ಹಿಂದೆಯೂ ನಡೆದಿವೆ. ಹಣ ಅಧಿಕಾರದ ಕಾರಣಕ್ಕಾಗಿ ಈ ರೀತಿಯ ಹತ್ಯೆಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸಾಧ್ಯ. ದ್ವೇಷಕ್ಕೆ ದ್ವೇಷ, ಹಿಂಸೆಗೆ ಹಿಂಸೆ ಉತ್ತರ ವಲ್ಲ ಎಂದು ರಮಾನಾಥ ರೈ ತಿಳಿಸಿದ್ದಾರೆ.
ಸುಳ್ಯದಲ್ಲಿ ನಡೆದ ಮಸೂದ್, ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ನೀಡಿದಂತೆ ತಾರತಮ್ಯ ಮಾಡದೆ ಎರಡೂ ಕುಟುಂಬಗಳಿಗೂ ಕನಿಷ್ಠ ತಲಾ 25 ಲಕ್ಷ ರೂ ಪರಿಹಾರ ನೀಡಬೇಕು. ನೈಜ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈ ಗೊಳ್ಳಬೇಕು ಎಂದು ರಮಾನಾಥ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಹರಿನಾಥ್, ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ಕುಮಾರ್ ದಾಸ್, ಪುರುಷೋತ್ತಮ ಚಿತ್ರಾಪುರ, ಉಮೇಶ್ ದಂಡಕೇರಿ, ಪ್ರತಿಭಾ ಕುಳಾಯಿ, ಪದ್ಮನಾಭ ಅಮೀನ್, ದೀಪಕ್ ಪೂಜಾರಿ, ನೀರಜ್ ಪಾಲ್, ರಮಾನಂದ, ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.