ಸಲಿಂಗಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಮಂಕಿಪಾಕ್ಸ್: ಪುರುಷರಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಸಲಹೆ

ಜಿನೀವಾ: ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳು ಜಾಗತಿಕವಾಗಿ ಏರಿಕೆಯಾಗುತ್ತಿರುವ ನಡುವೆ ಬುಧವಾರ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯೊಂದನ್ನು ನೀಡಿದ್ದು ಸಲಿಂಗಿ ಪುರುಷರು ತಮ್ಮ ಲೈಂಗಿಕ ಸಂಗಾತಿಗಳ ಸಂಖ್ಯೆಯನ್ನು ಮಿತಿಗೊಳಿಸುವಂತೆ ಸೂಚಿಸಿದೆ. ಪ್ರಸ್ತುತ ಈ ಸೋಂಕು ಹೆಚ್ಚಾಗಿ ಪುರುಷರಲ್ಲಿ ಅದರಲ್ಲೂ ಸಲಿಂಗಿಗಳಲ್ಲಿ ಕಂಡು ಬಂದಿದೆ.
ಕಳೆದ ಶನಿವಾರವಷ್ಟೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧನೊಂ ಘೆಬ್ರೆಯೆಸಸ್ ಅವರು ಮಂಕಿಪಾಕ್ಸ್ ಅನ್ನು ಜಾಗತಿ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಿದ್ದರು.
"ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪುರುಷರು, ಸದ್ಯಕ್ಕೆ ತಮ್ಮ ಲೈಂಗಿಕ ಸಂಗಾತಿಗಳ ಸಂಖ್ಯೆಯನ್ನು ಮಿತಿಗೊಳಿಸಬೇಕು, ಹೊಸಬರೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದರಿಂದ ದೂರವಿರಿ ಹಾಗೂ ಹೊಸಬರೊಂದಿಗೆ ಸಂಪರ್ಕ ಹೊಂದಿದ್ದರೂ ಅಗತ್ಯ ಅವರ ಸಂಪರ್ಕ ಮಾಹಿತಿಗಳನ್ನು ಹೊಂದಿಕೊಳ್ಳಿ" ಎಂದು ಅವರು ಹೇಳಿದರು.
ಜಗತ್ತಿನಾದ್ಯಂತ 18000ಕ್ಕೂ ಅದಧಿಕ ಮಂಕಿಪಾಕ್ಸ್ ಪ್ರಕರಣಗಳು 78 ದೇಶಗಳಿಂದ ವರದಿಯಾಗಿದ್ದು ಶೇ 70ರಷ್ಟು ಪ್ರಕರಣಗಳು ಯುರೋಪ್ ಮತ್ತು ಶೇ 25ರಷ್ಟು ಪ್ರಕರಣಗಳು ಅಮೆರಿಕಾದಿಂದ ವರದಿಯಾಗಿದೆ ಎಂದು ಅವರು ಹೇಳಿದರಲ್ಲದೆ ಇಲ್ಲಿಯವರಗೆ 5 ಮಂದಿ ಸಾವನ್ನಪ್ಪಿದ್ದು ಸೋಂಕಿತರ ಪೈಕಿ ಶೇ 10ರಷ್ಟು ಮಂದಿ ನೋವು ನಿವಾರಣೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದರು.
ಒಟ್ಟು ಪ್ರಕರಣಗಳ ಪೈಕಿ ಶೇ 98ರಷ್ಟು ಪ್ರಕರಣಗಳು ಪುರುಷರಲ್ಲಿ ಅದು ಕೂಡ ಸಲಿಂಗಿಗಳಲ್ಲಿ ಪತ್ತೆಯಾಗಿದೆ.
ಸಾಮಾನ್ಯವಾಗಿ ಚರ್ಮದ ಸಂಪರ್ಕದಿಂದ ಈ ಸೋಂಕು ತಗಲುತ್ತದೆ ಹಾಗೂ ಕೆಲವೊಮ್ಮೆ ಮಂಕಿಪಾಕ್ಸ್ ಸೋಂಕಿತರು ಬಳಸಿದ ಬಟ್ಟೆಗಳ ಮೂಲಕವೂ ಹರಡುತ್ತದೆ. ಸದ್ಯ ಪ್ರಮುಖವಾಗಿ ಇದು ಲೈಂಗಿಕ ಸಂಪರ್ಕದಿಂದ ಹರಡುವ ಕಾಯಿಲೆಯೆಂದು ತಿಳಿಯಲಾಗಿದ್ದು ಇದು ಬೇರೆ ರೀತಿಯಲ್ಲಿ ಹರಡುತ್ತಿದೆಯೇ ಎಂಬುದನ್ನು ತಜ್ಞರು ಅವಲೋಕಿಸುತ್ತಿದ್ದಾರೆ. ಅಮೆರಿಕಾದಲ್ಲಿ ಕನಿಷ್ಠ ಎಂಟು ಮಹಿಳೆಯರು ಹಾಗೂ ಇಬ್ಬರು ಮಕ್ಕಳಿಗೆ ಈ ಸೋಂಕು ತಗಲಿರುವ ಮಾಹಿತಿಯಿದೆ.
ಜ್ವರ, ಮೈಕೈನೋವು, ಚಳಿ, ಆಯಾಸ ಹಾಗೂ ಮೈಗಳಲ್ಲಿ ದದ್ದು ಸಾಮಾನ್ಯ ಲಕ್ಷಣಗಳಾಗಿದ್ದು ಕೆಲವೊಮ್ಮೆ ಈ ದದ್ದುಗಳು ತೀವ್ರ ನೋವುಂಟು ಮಾಡುತ್ತವೆ,







