ಪ್ರವೀಣ್ ಹತ್ಯೆ,ಇಬ್ಬರ ಬಂಧನ ಹಿನ್ನೆಲೆ; ಇಂತಹ ಪ್ರಕರಣಗಳಿಗೆ ತಾರ್ಕಿಕ ಅಂತ್ಯಕ್ಕೆ ಎಲ್ಲಾ ಕ್ರಮ: ಸಚಿವ ಸುನಿಲ್ ಕುಮಾರ್

ಮಂಗಳೂರು, ಜು. 28: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸರಕಾರ ಕೈಕಟ್ಟಿ ಕುಳಿತಿಲ್ಲ. ಘಟನೆ ನಡೆದ 24 ಗಂಟೆಯಲ್ಲಿ ಎರಡು ಜನರ ಬಂಧನವಾಗಿದೆ. ತಪ್ಪಿತಸ್ಥರನ್ನು ಹೆಡೆಮುರಿ ಕಟ್ಟಿ, ಇದರ ಹಿಂದೆ ಮುಂದೆ ಯಾರಿದ್ದಾರೆ. ಇದಕ್ಕೆ ಹಣಕಾಸಿನ ನೆರವು ಯಾರು ನೀಡಿದ್ದಾರೆ ಎಂದು ಕಂಡು ಹಿಡಿದು ಎಲ್ಲರನ್ನೂ ಬಗ್ಗು ಬಡಿದು ಇಂತಹ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮನೆಯ ಮಗ, ಪ್ರಾಮಾಣಿಕ ಕಾರ್ಯಕರ್ತನನ್ನು ಕಳೆದುಕೊಂಡಾಗ ಸಹಜವಾಗಿ ನೋವಾಗುತ್ತದೆ. ನಾವೆಲ್ಲಾ ಕಾರ್ಯಕರ್ತರಾಗಿ ಮಂತ್ರಿಯಾದವರು. ಕಾರ್ಯಕರ್ತರ ಭಾವನೆಗಳು, ನೋವು ಹಾಗೂ ಇದೇ ರೀತಿಯ ಹೋರಾಟಗಳಿಂದ ನಾವೆಲ್ಲಾ ಬಂದ ಕಾರಣ ಈ ಬಗ್ಗೆ ಅರಿವಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಎಲ್ಲಾ ಆಲೋಚನೆಗಳನ್ನು ಮಾಡಲಾಗಿದೆ. ಕಾನೂನಿನ ಚೌಕಟ್ಟು, ಸಂವಿಧಾನದ ಚೌಕಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.
ನಿನ್ನೆಯಿಂದಲೇ ಈ ಬಗ್ಗೆ ಅಧಿಕಾರಿಗಳ ಜತೆ ಮಾತನಾಡಿ ನಮಗಿರುವ ಮಾಹಿತಿಗಳನ್ನು ಹಂಚಿಕೊಂಡಿದ್ದೇವೆ. ಪೊಲೀಸರು 24 ಗಂಟೆಯಲ್ಲಿ ಇಬ್ಬರನ್ನು ಬಂಧಿಸಿದ್ದಲ್ಲದೇ ಕೆಲ ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ತನಿಖೆಗೆ ಮುಕ್ತವಾದ ಅವಕಾಶ ನೀಡಲಾಗಿದೆ. ಇದೇ ರೀತಿ ತನಿಖೆಯಾಗಬೇಕು, ಇಂತಹವರೇ ಆರೋಪಿಗಳ ಬಂಧನವಾಗಬೇಕು ಎಂದು ಸರಕಾರ ಎಲ್ಲೂ ಮೂಗು ತೂರಿಸಿಲ್ಲ. ರಾಜ್ಯದಲ್ಲಿ ಇನ್ನು ಮುಂದೆ ಈ ರೀತಿಯ ಪುಂಡಾಟಿಕೆ ನಡೆಯದಂತೆ ತಾರ್ಕಿಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಪೊಲೀಸರಿಗೆ ತಿಳಿಸಲಾಗಿದೆ. ಯಾವ ಪಿಎಫ್‌ಐ ಸಂಘಟನೆ ಗಲಭೆಯೇ ನಮ್ಮ ಚಟುವಟಿಕೆ ಅಂದುಕೊಂಡಿದ್ದಾರೋ ಅಂತಹ ಮಾನಸಿಕತೆಯನ್ನು ಹತ್ತಿಕ್ಕಲು ಎಲ್ಲಾ ಸಿದ್ಧತೆ ಮಾಡುವಂತೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯನಿರತರಾಗಿದ್ದೇವೆ ಎಂದು ಅವರು ಹೇಳಿದರು.
ನಿನ್ನೆ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಸಹಜವಾಗಿ ಜನಾಕ್ರೋಶ ನಿರ್ಮಾಣವಾಗಿದೆ. ಕಾರ್ಯಕರ್ತರ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆರೋಪಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ನಿರೀಕ್ಷೆಯನ್ನು ಜನ ಮತ್ತು ಕಾರ್ಯಕರ್ತರು ಬಯಸಿದ್ದಾರೆ. ಇಂದು ಅಂತಹ ಕೊಲೆಗಡುಕರನ್ನು ಅದೇ ರೀತಿಯ ಉತ್ತರ ನೀಡಬೇಕೆಂಬ ಆಕ್ರೋಶ ಜನಮಾನಸದಲ್ಲಿ ಬರುತ್ತಿದೆ. ಗಡಿ ಭಾಗದ ಜಿಲ್ಲೆ ಆಗಿರುವುದರಿಂದ ಕ್ರಮಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಪಿಎಫ್‌ಐ ಸಂಘಟನೆಯ ಹಿಂದಿನ ಘಟನೆಗಳ ಆರೋಪಿಗಳನ್ನು ಪತ್ತೆಹಚ್ಚಬೇಕು. ಅವರ ಹಿಂದಿನ ಶಂಕಿತರನ್ನು ಗಮನಿಸಬೇಕೆಂದು ಸೂಚಿಸಲಾಗಿದೆ. ನಮ್ಮ ಸರಕಾರದ ಮೇಲೆ ವಿಶ್ವಾಸ ಇಡಬೇಕಾಗಿದೆ. ಇದೇ ಬಿಜೆಪಿ ಸರಕಾರ ಡಿಜೆ ಹಳ್ಳಿ ಗಲಾಟೆಯನ್ನು ಹತ್ತಿಕ್ಕಿದೆ. ಇದೇ ಬಿಜೆಪಿ ಸರಕಾರ ಮಂಗಳೂರಿನ ಸಿಎಎ ಗಲಭೆಯನ್ನು ಹತ್ತಿಕ್ಕಿದ್ದು. ಇದೇ ಸರಕಾರ ಹುಬ್ಬಳ್ಳಿಯ ಘಟನೆಯಲ್ಲಿ 24 ಗಂಟೆಯಲ್ಲಿ ರಾಜಸ್ತಾನದಿಂದ ಆರೋಪಿಯನ್ನು ತಂದಿದ್ದು, ಇದೇ ಸರಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದು, ಮತಾಂತರ ನಿಷೇಧ ಕಾಯಿದೆ ಜಾರಿಗೆ ತಂದಿದ್ದು, ಇಂತಹ ಘಟನೆ ನಡೆದಾಗ ಇನ್ನಷ್ಟು ಉಗ್ರ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಾರ್ಯಕರ್ತರು ಬಯಸುತ್ತಾರೆ. ಅವರ ನಿರೀಕ್ಷೆಗಳನ್ನು ಮುಟ್ಟಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.