ಪರಿಶಿಷ್ಟ ಜಾತಿ ಗುತ್ತಿಗೆದಾರರಿಗೆ ಕೆಲಸ ನಿರ್ವಹಿಸಲು ತೊಂದರೆ; ಜಡ್ಕಲ್ ಗ್ರಾಮಸಭೆಯಲ್ಲಿ ವಾಸುದೇವ ಮೂದೂರು ಆಕ್ರೋಶ

ಕುಂದಾಪುರ, ಜು.28: ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಪರಿಶಿಷ್ಟರಿಗೆ ಮೀಸಲಿರಿಸಿದ ಗುತ್ತಿಗೆಯನ್ನು ನಿರ್ವಹಿಸಲು ಬಿಡುತ್ತಿಲ್ಲ ಅದರಿಂದ ಕಾಮಗಾರಿ ವಿಳಂಬ ಆಗುತ್ತಿದೆ. ಈ ಬಗ್ಗೆ ಆ ಸದಸ್ಯರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿ ಗುತ್ತಿಗೆದಾರ ವಾಸುದೇವ ಮೂದುರು ಒತ್ತಾಯಿಸಿದ್ದಾರೆ.
ಗ್ರಾಪಂ ಅಧ್ಯಕ್ಷೆ ವನಾಜಾಕ್ಷಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಜಡ್ಕಲ್ ಗ್ರಾಮ ಸಭೆಯಲ್ಲಿ ಅವರು ಮಾತನಾಡುತಿದ್ದರು. ಪ್ರಚಾರವಿಲ್ಲದೆ ಈ ಗ್ರಾಮ ಸಭೆಯಲ್ಲಿ ನಡೆಯುತ್ತದೆ. ಈ ಸಭೆಯಲ್ಲಿ ಇಂಜಿನಿಯರ್‌ಗಳು ಬಂದಿಲ್ಲ. ಕಾಟಾ ಚಾರಕ್ಕೆ ಸಭೆಯನ್ನು ನಡೆಸಲಾಗುತ್ತಿದೆ ಎಂದು ಪ್ರಭಾಕರ್ ಶೆಟ್ಟಿ ಹಾಗೂ ಸೈಮನ್ ಜೋಸೆಫ್ ದೂರಿದರು.
ಎರಡನೆ ವಾರ್ಡ್‌ನಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿನ ಜನರಿಗೆ ಅಗತ್ಯವಾಗಿ ಬೇಕಾಗಿರುವುದು ಸ್ಮಶಾನವೇ ಹೊರತು ಸಾರಾಯಿ ಅಂಗಡಿ ಅಲ್ಲ. ಆದುದರಿಂದ ಸಭೆಗೆ ಅಬಕಾರಿ ಇಲಾಖೆಯವರನ್ನು ಕರೆಸಬೇಕು ಎಂದು ಸುಬ್ಬಯ್ಯ ನಾಯ್ಕ ಒತ್ತಾಯಿಸಿದರು. ಮತ್ತೆ ಸಭೆಗೆ ಆಗಮಿಸಿದ ಅಬಕಾರಿ ಇಲಾಖೆಯ ಸಿಬ್ಬಂದಿ, ಇಲ್ಲಿ ಯಾವುದೇ ಅಕ್ರಮ ಸಾರಾಯಿ ನಡೆಯುತ್ತಿಲ್ಲ ಎಂದರು. ಸಭೆಗೆ ಸುಳ್ಳು ಮಾಹಿತಿ ನೀಡಬೇಡಿ ಎಂದು ಪ್ರಭಾಕರ ಶೆಟ್ಟಿ ತಾಕೀತು ಮಾಡಿದರು.
ಬೆಳಕಲ್ ತೀರ್ಥದಲ್ಲಿ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಕರ್ಯ ಇಲ್ಲದಿದ್ದರೂ ಅರಣ್ಯ ಇಲಾಖೆಯಿಂದ ಸುಲಿಗೆ ನಡೆಯುತ್ತಿದೆ. ಅಲ್ಲಿ ಶುಲ್ಕ ಸಂಗ್ರಹ ಜವಾಬ್ದಾರಿ ಹಾಗೂ ನಿರ್ವಹಣೆಯನ್ನು ಪಂಚಾಯತ್‌ಗೆ ನೀಡಬೇಕು ಎಂದು ವಾಸುದೇವ ಮೂದುರು ಆಗ್ರಹಿಸಿದರು.
ಸುಮಾರು 15 ವರ್ಷಗಳಿಂದ ಪರಿಶಿಷ್ಟ ಮೂರು ಮನೆಯವರಿಗೆ ವಿದ್ಯುತ್ ನೀಡದೆ ಸತಾಯಿಸಲಾಗುತ್ತಿದೆ. ಅವರ ವಿರುದ್ಧ ದಲಿತ ದೌರ್ಜನ್ಯ ಕಾಯಿದೆ ಪ್ರಕರಣ ದಾಖಲಿಸಬೇಕಾಗಿದೆ. ಈಗಾಗಲೆ ಡಿಸಿ ಸಭೆಯಲ್ಲಿ ವಿದ್ಯುತ್ ನೀಡಲು ಆದೇಶ ನೀಡಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಡಿಸಿ ಆದೇಶಕ್ಕೆ ಕವಡೆ ಕಾಸು ಕಿಮ್ಮತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನೋಡೆಲ್ ಅಧಿಕಾರಿ ಸಹಾಯ ಕೃಷಿ ಅಧಿಕಾರಿ ಪರುಶುರಾಮ್, ಶಿಕ್ಷಣ ಇಲಾಖೆಯಿಂದ ಸಿಆರ್‌ಪಿ ವಿಶ್ವನಾಥ ನಾಯ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಂಧು ಕುಮಾರಿ, ಎಎಸ್ಸೈ ರವೀಶ್ ಹೊಳ್ಳ, ಅರಣ್ಯ ಇಲಾಖೆಯ ವಿವೇಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿವಾಕರ್ ಶಾನು ಬಾಗ್, ಕಾರ್ಯದರ್ಶಿ ಶಂಕರ್ ಆಚಾರ್ಯ, ಉಪಾಧ್ಯಕ್ಷ ಲಕ್ಷಣ ಶೆಟ್ಟಿ ಉಪಸ್ಥಿತರಿದ್ದರು.







