ತಾನು ಪ್ರಕರಣವನ್ನು ವಿಳಂಬಿಸುತ್ತಿದ್ದೇನೆ ಎಂಬ ವರದಿಗಳ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ
‘ನ್ಯಾಯಾಧೀಶರನ್ನು ಗುರಿಯಾಗಿಸಿಕೊಳ್ಳುವುದಕ್ಕೂ ಒಂದು ಮಿತಿಯಿದೆ’

ಹೊಸದಿಲ್ಲಿ,ಜು.28: ದೇಶಾದ್ಯಂತ ಕ್ರೈಸ್ತ ಸಂಸ್ಥೆಗಳು ಮತ್ತು ಧರ್ಮಗುರುಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ ಎಂದು ಆರೋಪಿಸಿರುವ ಅರ್ಜಿಯೊಂದರ ವಿಚಾರಣೆಯನ್ನು ತಾನು ವಿಳಂಬಿಸುತ್ತಿದ್ದೇನೆ ಎಂಬ ಮಾಧ್ಯಮಗಳ ವರದಿಗಳ ಬಗ್ಗೆ ಗುರುವಾರ ಅಸಮಾಧಾನವನ್ನು ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,ನೀವು ನ್ಯಾಯಾಧೀಶರನ್ನು ಗುರಿಯಾಗಿಸಿಕೊಳ್ಳುವುದಕ್ಕೂ ಒಂದು ಮಿತಿಯಿದೆ ಎಂದು ಹೇಳಿತು.
‘ನಮಗೆ ವಿರಾಮವನ್ನು ನೀಡಿ. ಕಳೆದ ಸಲ ನ್ಯಾಯಾಧೀಶರಲ್ಲೋರ್ವರು ಕೋವಿಡ್ ಪೀಡಿತರಾಗಿದ್ದರಿಂದ ವಿಷಯವನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯನ್ನು ವಿಳಂಬಿಸುತ್ತಿದೆ ಎಂದು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಿದ್ದೀರಿ. ನೋಡಿ,ನ್ಯಾಯಾಧೀಶರನ್ನು ಗುರಿಯಾಗಿಸಿಕೊಳ್ಳಲೂ ಒಂದು ಮಿತಿಯಿದೆ. ನಿಮಗೆ ಇವೆಲ್ಲ ಸುದ್ದಿಗಳನ್ನು ಯಾರು ಒದಗಿಸುತ್ತಾರೆ? ನ್ಯಾಯಾಧೀಶರು ವಿಚಾರಣೆಯನ್ನು ವಿಳಂಬಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಆನ್ಲೈನ್ನಲ್ಲಿ ನಾವು ಗಮನಿಸಿದ್ದೇವೆ. ಅದೇನೇ ಇರಲಿ. ನಾವು ವಿಷಯವನ್ನು ವಿಚಾರಣೆಗಾಗಿ ಪಟ್ಟಿ ಮಾಡುತ್ತೇವೆ,ಇಲ್ಲದಿದ್ದರೆ ಇನ್ನೊಂದು ಸುದ್ದಿಯಾಗುತ್ತದೆ ’ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಸೂರ್ಯಕಾಂತ ಅವರ ಪೀಠವು ಹೇಳಿತು.
ಅರ್ಜಿದಾರರ ಪರ ವಕೀಲರು ಪ್ರಕರಣದ ವಿಚಾರಣೆಯನ್ನು ಕೋರಿದ ಬಳಿಕ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಜೂನ್ನಲ್ಲಿ ರಜಾಕಾಲ ಪೀಠದ ಮುಂದೆ ವಿಷಯವನ್ನು ಉಲ್ಲೇಖಿಸಿದ್ದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು,ದೇಶಾದ್ಯಂತ ಕ್ರೈಸ್ತ ಸಂಸ್ಥೆಗಳು ಮತ್ತು ಧರ್ಮಗುರುಗಳ ವಿರುದ್ಧ ಪ್ರತಿ ತಿಂಗಳೂ ಸರಾಸರಿ 45ರಿಂದ 50ರಷ್ಟು ಹಿಂಸಾತ್ಮಕ ದಾಳಿಗಳು ನಡೆಯುತ್ತಿವೆ ಎಂದು ತಿಳಿಸಿದ್ದರು.
ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಹೊರಡಿಸಿದ್ದ ಮಾರ್ಗಸೂಚಿಗಳನ್ನು ಅನುಷ್ಠಾನಿಸುವಂತೆ ಅರ್ಜಿದಾರರಾದ ಪೀಟರ್ ಮಛಾಡೊ ಮತ್ತು ಇತರರು ಕೋರಿದ್ದಾರೆ. ದ್ವೇಷಾಪರಾಧಗಳನ್ನು ಗಮನಿಸಲು ಮತ್ತು ಎಫ್ಐಆರ್ಗಳನ್ನು ದಾಖಲಿಸಲು ನೋಡಲ್ ಅಧಿಕಾರಿಗಳನ್ನು ನೇಮಕಗೊಳಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.
2018ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯಗಳಿಗೆ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ತ್ವರಿತ ನ್ಯಾಯಾಲಯಗಳು,ಸಂತ್ರಸ್ತರಿಗೆ ಪರಿಹಾರ,ತಡೆಗಟ್ಟಲು ಶಿಕ್ಷೆ ಮತ್ತು ಕಾನೂನು ಜಾರಿ ಅಧಿಕಾರಿಗಳ ಕರ್ತವ್ಯಲೋಪಕ್ಕಾಗಿ ಶಿಸ್ತು ಕ್ರಮ ಇವು ಈ ಮಾರ್ಗಸೂಚಿಗಳಲ್ಲಿ ಸೇರಿವೆ.
ದ್ವೇಷಾಪರಾಧಗಳು,ತಥಾಕಥಿತ ಗೋರಕ್ಷಣೆ ಮತ್ತು ಥಳಿಸಿ ಹತ್ಯೆಯಂತಹ ಅಪರಾಧಗಳನ್ನು ಮೊಳಕೆಯಲ್ಲಿಯೇ ಚಿವುಟಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು.







