ಲಂಚ ಪ್ರಕರಣ| ಐಎಎಸ್ ಅಧಿಕಾರಿ ಮಂಜುನಾಥ್ ಜಾಮೀನು ಅರ್ಜಿ: ಆ.1ರಂದು ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಸೂಚನೆ

ಬೆಂಗಳೂರು, ಜು.28: ಲಂಚ ಸ್ವೀಕಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್, ಆಗಸ್ಟ್ 1ರಂದು ಆಕ್ಷೇಪಣೆ ಸಲ್ಲಿಸಲು ಗುರುವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಸೂಚಿಸಿದೆ.
ಜಾಮೀನು ಕೋರಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಸೂಚನೆ ನೀಡಿದೆ.
ಲಂಚ ಸ್ವೀಕಾರ ಕೇಸ್‍ನಲ್ಲಿ ಜು.4ರಂದು ಬಂಧನಕ್ಕೆ ಒಳಗಾಗಿದ್ದ ಜೆ.ಮಂಜುನಾಥ್ ಸದ್ಯ ನ್ಯಾಯಾಂಗ ಬಂಧನಲ್ಲಿದ್ದಾರೆ. ಜಾಮೀನು ಕೋರಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ಇದರಿಂದ, ಅವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಏನಿದೆ: ಲಂಚ ಸ್ವೀಕಾರ ಕೇಸ್‍ಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಲಂಚ ಸ್ವೀಕರಿಸಿದ ವೇಳೆಯಲ್ಲಿ ನಾನು ಆ ಸ್ಥಳದಲ್ಲಿಯೂ ಇರಲಿಲ್ಲ. ಪ್ರಕರಣದ ಸಂಬಂಧ ಸಂಗ್ರಹಿಸಲಾಗಿರುವ ದಾಖಲೆಗಳೂ ಸಹ ದಾಳಿ ನಡೆಸಿದ ದಿನ ಅಥವಾ ಅದಕ್ಕೂ ಮೊದಲು ಯಾವುದೇ ಹಂತದಲ್ಲಿ ನಾನು ಹಣಕ್ಕಾಗಿ ಬೇಡಿಕೆ ಇಟ್ಟಿರುವುದನ್ನು ತೋರಿಸುತ್ತಿಲ್ಲ ಎಂದು ಅರ್ಜಿಯಲ್ಲಿ ಐಎಎಸ್ ಅಧಿಕಾರಿ ಮಂಜುನಾಥ್ ಅವರು ಉಲ್ಲೇಖಿಸಿದ್ದಾರೆ.
ಒಂದೂವರೆ ತಿಂಗಳು ಅಧಿಕ ಸಮಯದಿಂದ ತನಿಖೆ ನಡೆಸಲಾಗುತ್ತಿದ್ದು, ಈ ಇಡೀ ಪ್ರಕರಣದಲ್ಲಿ ಎಲ್ಲಿಯೂ ನನ್ನ ಪಾತ್ರವಿರುವ ಬಗ್ಗೆ ಕೇಳಿ ಬಂದಿರಲಿಲ್ಲ. ಮೊದಲ ಮತ್ತು ಎರಡನೆ ಆರೋಪಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಎಸಿಬಿ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿಯೂ ನನ್ನ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕೆಲ ಬಾಹ್ಯ ಒತ್ತಡಗಳಿಂದ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದ್ದು, ಇದು ನ್ಯಾಯಸಮ್ಮತವಲ್ಲ. ಹೀಗಾಗಿ, ಜಾಮೀನು ಮನವಿಯನ್ನು ಮಾನ್ಯ ಮಾಡಬೇಕೆಂದು ಮಂಜುನಾಥ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.







