ಬಿಬಿಎಂಪಿ ಚುನಾವಣೆ ಕೂಡಲೇ ನಡೆಸಲು ಕಾಂಗ್ರೆಸ್ ಆಗ್ರಹ

ಬೆಂಗಳೂರು, ಜು. 28: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಕಾರ್ಪೊರೇಟರ್ ಗಳಿದ್ದರೆ ಹಣ ಕೊಳ್ಳೆ ಹೊಡೆಯಲು ಬಿಡುವುದಿಲ್ಲ ಎಂಬ ಕಾರಣಕ್ಕಾಗಿ ಚುನಾವಣೆ ನಡೆಸಲು ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿಯೇ ವಿಳಂಬ ನೀತಿ ಅನುಸರಿಸುತ್ತಿದೆ' ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕಾರ್ಪೋರೇಟರ್ ಎಸ್.ಉದಯ್ ಕುಮಾರ್ ದೂರಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ಮತ್ತು ಆಡಳಿತ ವಿಕೇಂದ್ರೀಕರಣದಲ್ಲಿ ನಂಬಿಕೆ ಇದ್ದರೆ, ಜನರ ಕಷ್ಟಗಳಿಗೆ ಸ್ಪಂದಿಸಬೇಕೆಂಬ ಇಚ್ಛಾಶಕ್ತಿ ಸರಕಾರಕ್ಕೆ ನಿಜಕ್ಕೂ ಇದ್ದರೆ ಕೂಡಲೇ ಬಿಬಿಎಂಪಿ ಚುನಾವಣೆ ನಡೆಸಬೇಕು. ಎರಡು ವರ್ಷದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಬಿಬಿಎಂಪಿ ಅಕ್ಷರಶಃ ಅನಾಥವಾಗಿದೆ. ನಾಗರಿಕರ ಸಮಸ್ಯೆಗಳನ್ನು ಆಲಿಸಲು ಸದಸ್ಯರಿಲ್ಲ' ಎಂದು ಟೀಕಿಸಿದರು.
‘ನಗರದ ಜನತೆ ರಸ್ತೆ ಗುಂಡಿ, ಚರಂಡಿ, ಕುಡಿಯುವ ನೀರು, ಸಂಚಾರ ದಟ್ಟಣೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೆ, ಸಾಕಷ್ಟು ಸಮಸ್ಯೆಗಳಿಂದ ನಲುಗಿದ್ದಾರೆ. ಜನರ ಕುಂದು-ಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡಬೇಕಿದೆ. ಸ್ಥಳೀಯ ಕಾಪೆರ್Çೀರೇಟರ್‍ಗಳ ಅತ್ಯಗತ್ಯ. ಹೀಗಾಗಿ ರಾಜ್ಯ ಸರಕಾರ ಕೂಡಲೇ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕು' ಎಂದು ಉದಯ್ ಕುಮಾರ್ ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಿ ಪ್ರಸಾದ್, ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಸನ್ನದ್ಧವಾಗಿದ್ದು, ಆರು ತಿಂಗಳ ಮೊದಲೇ ಅಭ್ಯರ್ಥಿಯನ್ನು ಘೋಷಿಸಲಿದೆ. ಚುನಾವಣೆ ಸಮೀಪದಲ್ಲಿ ಅಭ್ಯರ್ಥಿಗಳನ್ನು ಘೋಷಿಸುವುದು ಸೋಲಿಗೆ ಪ್ರಮುಖ ಕಾರಣ. ಹೀಗಾಗಿ ಮೊದಲೇ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದರು. ಪಕ್ಷದ ಮುಖಂಡ ಟಿ.ನಾಗೇಶ್ ಹಾಜರಿದ್ದರು.







