ತೊಂಡ್ಲೆ -ಕಾಶಿಕೊಡ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಧರಣಿ

ಉಡುಪಿ, ಜು.28: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೊಂಡ್ಲೆಯಿಂದ ಕಾಶಿಕೊಡ್ಲಿಗೆ ಹೋಗುವ ರಸ್ತೆಯನ್ನು ಸಂಪೂರ್ಣ ಡಾಮರೀಕರಣ ಅಥವಾ ಕಾಂಕ್ರೀಟ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಪಂಚಾಯತ್ ರಸ್ತೆಯನ್ನು ಬಳಸಿ ಹೊಂಡದಮನೆ, ಹುಲ್ಕಲ್, ಕುರುವಾಣ, ಕೆಳಾಡಿ, ಮಳಾಳಿ, ಹುಣ್ಸೆಮಕ್ಕಿ, ಕಾಶಿಕೊಡ್ಲು ಭಾಗದ ಸುಮಾರು ೬೯ ಮನೆಯ ೩೮೦ಕ್ಕೂ ಅಧಿಕ ಮಂದಿ ಜೀವನ ನಡೆಸುತ್ತಿದ್ದಾರೆ. ಈ ರಸ್ತೆಯು ವಿಪರೀತ ಮಳೆ, ಅವೈಜ್ಞಾನಿಕ ಕೊಳವೆ ವ್ಯವಸ್ಥೆ ಹಾಗೂ ಇತರ ಕಾರಣಗಳಿಂದ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಪಯಣ, ಕೃಷಿಕರ ದೈನಂದಿನ ವ್ಯವಹಾರ, ಅನಾರೋಗ್ಯ ಪೀಡಿತರ, ವಯೋವೃದ್ಧರನ್ನು ಆಸ್ಪತ್ರೆಗೆ ಸಾಗಿಸಲು ತೀವ್ರ ತೊಂದರೆ ಆಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಬಗ್ಗೆ ಸ್ಥಳೀಯ ಶಾಸಕರುಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಇತ್ತೀಚೆಗೆ ಸಂಸದರಿಗೂ ಮನವಿ ಪತ್ರ ತಲುಪಿಸಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಆದರೆ ಬಿಗಾಡಿಸುತ್ತಿರುವ ಈ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುವಂತೆ ಮಾಡಬೇಕು. ಈ ರಸ್ತೆ ಅಭಿವೃದ್ಧಿಯಿಂದ ಹಲವು ಮಂದಿಗೆ ನೆರವು ಆಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.





