ಕೆನಡಾ: ಚರ್ಚ್ ಶಾಲೆಗಳ ಭಯಾನಕತೆಯ ಬಗ್ಗೆ ಪೋಪ್ ಗೆ ಮಾಹಿತಿ
ಒಟ್ಟಾವ, ಜು.28: ಕೆನಡಾದಲ್ಲಿ ಸ್ಥಳೀಯರಿಗಾಗಿ ಚರ್ಚ್ ನಡೆಸುತ್ತಿದ್ದ ಶಾಲೆಗಳ ಭಯಾನಕತೆಯ ಬಗ್ಗೆ ಕೆನಡಾದ ಮುಖಂಡರು ಬುಧವಾರ ಪೋಪ್ ಫ್ರಾನ್ಸಿಸ್ರಿಗೆ ಮಾಹಿತಿ ನೀಡಿದರು. ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿಯೂ ಜನರು ಇನ್ನೂ ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ಪೋಪ್ ವಿಷಾದ ವ್ಯಕ್ತಪಡಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಪೋಪ್ ಫ್ರಾನ್ಸಿಸ್ ಕೆನಡಾದಲ್ಲಿ ಕ್ಷಮಾಯಾಚನೆಯ ಪ್ರವಾಸದಲ್ಲಿದ್ದಾರೆ.
ಸ್ಥಳೀಯರ ಸಂಸ್ಕೃತಿಯನ್ನು ಅಳಿಸಿಹಾಕುವ ಸರಕಾರದ ಕಾರ್ಯನೀತಿಯನ್ನು ಮುಂದುವರಿಸಿದ್ದ ವಸತಿ ಶಾಲೆಗಳಲ್ಲಿ ಚರ್ಚ್ಗಳ ಪಾತ್ರಕ್ಕಾಗಿ ಕ್ಷಮೆ ಯಾಚಿಸುವುದು ಪೋಪ್ ಅವರ ಭೇಟಿಯ ಪ್ರಮುಖ ಉದ್ದೇಶವಾಗಿದೆ. 1870ರಿಂದ 1996ರ ನಡುವಿನ ಅವಧಿಯಲ್ಲಿ ಕೆನಡಾದಲ್ಲಿ ಚರ್ಚ್ಗಳು ನಡೆಸುತ್ತಿದ್ದ ವಸತಿ ಶಾಲೆಗಳಲ್ಲಿ 1,50,000ಕ್ಕೂ ಅಧಿಕ ಸ್ಥಳೀಯ ಮಕ್ಕಳನ್ನು ಅವರ ಕುಟುಂಬದಿಂದ ಪ್ರತ್ಯೇಕಿಸಿ ದಾಖಲಿಸಿಕೊಳ್ಳಲಾಗಿತ್ತು. ತಮ್ಮ ಆಡುಭಾಷೆಯಲ್ಲಿ ಮಾತನಾಡಿದರೆ ಅವರನ್ನು ಥಳಿಸಲಾಗುತ್ತಿತ್ತು ಅಥವಾ ಉಪವಾಸ ಕೆಡವಲಾಗುತ್ತಿತ್ತು ಹಾಗೂ ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯವನ್ನೂ ನಡೆಸಲಾಗಿದೆ.
ಈ ವ್ಯವಸ್ಥೆಯನ್ನು ‘ಸಾಂಸ್ಕೃತಿಕ ನರಮೇಧ’ ಎಂದು ಕೆನಡಾದ ಸತ್ಯ ಮತ್ತು ಸಮನ್ವಯ ಆಯೋಗ ಕರೆದಿದೆ.
ಉತ್ತರ ಅಮೆರಿಕದಲ್ಲಿ ನಿರ್ಮಿಸಲಾದ ಬೃಹತ್ ಬ್ರಿಟಿಷ್ ಕೋಟೆ ‘ಸಿಟಡೆಲ್ ಡಿ ಕ್ವಿಬೆಕ್’ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹಾಗೂ ಸರಕಾರಿ ಸಿಬಂದಿಗಳಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪೋಪ್, ಸಂಪತ್ತಿನ ಅಸಾಮಾನ್ಯ ಹಂಚಿಕೆಯ ಅಮೂಲಾಗ್ರ ಅನ್ಯಾಯದ ಬಗ್ಗೆ ಮಾತನಾಡಿದರು.
ಆರ್ಥಿಕ ಅಭಿವೃದ್ಧಿಯಿಂದ ಉತ್ಪತ್ತಿಯಾಗುವ ಯೋಗಕ್ಷೇಮವು ಸಮಾಜದ ಎಲ್ಲಾ ಕ್ಷೇತ್ರಗಳಿಗೆ ಪ್ರಯೋಜನವನ್ನು ನೀಡುವುದಿಲ್ಲ ಎಂಬುದು ಅತ್ಯಂತ ಅವಮಾನದ ವಿಷಯವಾಗಿದೆ. ಹಲವು ನಿರ್ಗತಿಕರು ಅಥವಾ ನೆರವಿನ ಅಗತ್ಯ ಇರುವವರು ಬದುಕಲು ಚರ್ಚ್ಗಳು ಹಾಗೂ ಆಹಾರದ ಬ್ಯಾಂಕ್ಗಳನ್ನು ಅವಲಂಬಿಸಬೇಕಾಗಿದೆ.
ಸ್ಥಳೀಯರಲ್ಲಿ ಬಡತನದ ಹಲವು ಸೂಚ್ಯಾಂಕಗಳನ್ನು ನಿಖರವಾಗಿ ಕಾಣಬಹುದಾಗಿದ್ದು ಇದರ ಜತೆಗೆ ಕಡಿಮೆ ಶೇಕಡಾವಾರು ಶಾಲಾಶಿಕ್ಷಣ, ಮನೆ ಹೊಂದಲು, ಆರೋಗ್ಯ ಸೇವೆ ಪಡೆಯಲು ಕಡಿಮೆ ಅವಕಾಶದ ಸಹಿತ ಹಲವು ಋಣಾತ್ಮಕ ಸೂಚಕಗಳಿವೆ ಎಂದರು. ಕೆನಡಾದ ಜನಸಂಖ್ಯೆಯ ಸುಮಾರು 5%ದಷ್ಟಿರುವ ಸ್ಥಳೀಯ ನಿವಾಸಿಗಳಲ್ಲಿ ಬಹುತೇಕರು ಬಡವರಾಗಿದ್ದು ಇತರ ನಿವಾಸಿಗಳಿಗೆ ಹೋಲಿಸಿದರೆ ಇವರ ಜೀವಿತಾವಧಿಯೂ ಕಡಿಮೆಯಾಗಿದೆ.
ಹಿಂಸಾತ್ಮಕ ಅಪರಾಧ ಪ್ರಕರಣದ ಬಲಿಪಶುಗಳಾಗುತ್ತಿದ್ದು ಹಲವು ವ್ಯಸನಗಳ ದಾಸರಾಗಿ ಸೆರೆವಾಸ ಅನುಭವಿಸುವ ಪ್ರಮಾಣವೂ ಸ್ಥಳೀಯರಲ್ಲಿ ಹೆಚ್ಚಾಗಿದೆ. ಬಳಿಕ ಪೋಪ್ರ ಜತೆ ಮಾತನಾಡಿದ ಪ್ರಧಾನಿ ಜಸ್ಟಿನ್ ಟ್ರೂಡೊ ಮತ್ತು ಗವರ್ನರ್ ಮೇರಿ ಸಿಮೋನ್ (ಬ್ರಿಟನ್ ರಾಣಿ ಎಲಿಝಬೆತ್ರ ಪ್ರತಿನಿಧಿ), ಫ್ರಾನ್ಸಿಸ್ ಅವರು ಪೋಪ್ ಪಟ್ಟಕ್ಕೇರುವುದಕ್ಕೂ 2 ದಶಕಗಳ ಮೊದಲು ಮುಚ್ಚಲ್ಪಟ್ಟ ವಸತಿ ಶಾಲೆಗಳಲ್ಲಿ ತೆರೆದುಕೊಂಡ ಭಯಾನಕ ದುರಂತದ ಬಗ್ಗೆ ಕಟುವಾಗಿ ಮತ್ತು ಸ್ಪಷ್ಟವಾಗಿ ಹೇಳಿದರು ಎಂದು ವರದಿಯಾಗಿದೆ.