ರಾಜಕೀಯ ಒತ್ತಡಕ್ಕೆ ಮಣಿದು ಅಮಾಯಕ ಯುವಕರನ್ನು ಬಂಧಿಸುತ್ತಿರುವ ಪೊಲೀಸರ ಕ್ರಮ ಖಂಡನಾರ್ಹ : ಪಾಪ್ಯುಲರ್ ಫ್ರಂಟ್

ಮಂಗಳೂರು, ಜು.28: ಸುಳ್ಯದಲ್ಲಿ ನಡೆದ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ನಡೆಸುತ್ತಿರುವ ಬಂಧನ ಕಾರ್ಯಾಚರಣೆಯು ಖಂಡನಾರ್ಹವಾಗಿದೆ. ಬಿಜೆಪಿ ಸರಕಾರದ ಒತ್ತಡದಲ್ಲಿ ಪೊಲೀಸರು ಅಮಾಯಕರ ಬಂಧನವನ್ನು ಕೂಡಲೇ ನಿಲ್ಲಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಗ್ರಹಿಸುವುದಾಗಿ ಪಿಎಫ್ ಐ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಫರಂಗಿಪೇಟೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಂಘಪರಿವಾರದ ಯಾವುದೇ ಕಾರ್ಯಕರ್ತರ ಹತ್ಯೆಗಳು ನಡೆದಾಗಲೂ ಬಿಜೆಪಿ ಸಂಸದರು, ಸಚಿವರು ಗೊಂದಲಕಾರಿ ಹೇಳಿಕೆಗಳನ್ನು ನೀಡುವುದು, ಪಾಪ್ಯುಲರ್ ಫ್ರಂಟ್ ಮೇಲೆ ಆರೋಪ ಹೊರಿಸುವುದು, ನಂತರ ಜಿಲ್ಲೆಯ ಪೊಲೀಸರು ಅಮಾಯಕ ಮುಸ್ಲಿಮ್ ಯುವಕರನ್ನು ರಾತ್ರೋರಾತ್ರಿ ವಿಚಾರಣೆಯ ನೆಪದಲ್ಲಿ ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸುವುದು ವಾಡಿಕೆಯಾಗಿ ಬಿಟ್ಟಿದೆ. ಘಟನೆ ನಡೆದ ಮರುಕ್ಷಣದಲ್ಲಿ, ವಿಶೇಷವಾಗಿ ಪೊಲೀಸರ ಪ್ರಾಥಮಿಕ ತನಿಖೆ ಪೂರ್ಣಗೊಳ್ಳುವ ಮುನ್ನವೇ ಬಿಜೆಪಿ ನಾಯಕರು ದ್ವೇಷದ ಹೇಳಿಕೆ ನೀಡಿ ಪರಿಸ್ಥಿತಿಯನ್ನು ಪ್ರಕ್ಷ್ಯುಬ್ಧಗೊಳಿಸಿಬಿಡುತ್ತಾರೆ.
ಸಂಘಪರಿವಾರದ ಕಾರ್ಯಕರ್ತರ ಕೊಲೆ ಘಟನೆಗಳು ನಡೆದಾಗ, ಪ್ರತಿಬಾರಿಯೂ ಬಿಜೆಪಿ ನಾಯಕರು ಸ್ವತಂತ್ರ ತನಿಖೆಗೆ ಅವಕಾಶ ಮಾಡಿಕೊಡದೇ ಇತರ ಸಂಘಟನೆಗಳ ಮೇಲೆ ಆರೋಪ ಹೊರಿಸುತ್ತಾ ಬರುತ್ತಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಸಂಘಪರಿವಾರದ ಕಾರ್ಯಕರ್ತರೇ ಅರೋಪಿಗಳಾಗಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿತ್ತು. ಸುಳ್ಯದ ಘಟನೆಯಲ್ಲೂ ಅವರು ತಮ್ಮ ಹಳೆ ಚಾಳಿಯನ್ನೇ ಮುಂದುವರಿಸಿದ್ದಾರೆ.
ಸುಳ್ಯ ಘಟನೆಗೆ ಸಂಬಂಧಿಸಿ ಬಂಧಿತರಾಗಿರುವ ಯುವಕರ ಕುಟುಂಬಸ್ಥರ ಹೇಳಿಕೆಗಳೂ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಪೊಲೀಸರ ತನಿಖೆಯನ್ನೇ ಸಂಶಯದಿಂದ ನೋಡುವಂತೆ ಮಾಡಿದೆ. ಅವರ ಅಮಾಯಕತೆ ಅವರ ಮಾತುಗಳಲ್ಲೇ ವ್ಯಕ್ತವಾಗುತ್ತದೆ. ಬಂಧಿತ ಇಬ್ಬರು ಯುವಕರೂ ಅಮಾಯಕರಾಗಿದ್ದು, ಪೊಲೀಸರು ರಾಜಕೀಯ ಪ್ರೇರಿತವಾಗಿ ತನಿಖೆ ನಡೆಸುವುದನ್ನು ಕೂಡಲೇ ನಿಲ್ಲಿಸಬೇಕು. ಪೊಲೀಸ್ ಇಲಾಖೆ ಬಿಜೆಪಿಯ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸುವುದಾಗಿ ಇಜಾಝ್ ಅಹ್ಮದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಿಎಫ್ ಐ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಶ್ರಫ್ ಜೋಕಟ್ಟೆ ಉಪಸ್ಥಿತರಿದ್ದರು.







