ಸರಣಿ ಪಶ್ಚಾತ್ಕಂಪನದ ಆಘಾತಕ್ಕೆ ನಲುಗಿದ ಫಿಲಿಪ್ಪೀನ್ಸ್
ಮನಿಲಾ, ಜು.28: ಬುಧವಾರ ಬೆಳಿಗ್ಗೆ ಸಂಭವಿಸಿದ ತೀವ್ರ ಭೂಕಂಪನದ ಪ್ರಹಾರದಿಂದ ಚೇತರಿಸಿಕೊಳ್ಳುವ ಮೊದಲೇ ಫಿಲಿಪ್ಪೀನ್ಸ್ನಲ್ಲಿ ಗುರುವಾರ ನೂರಾರು ಪಶ್ಚಾತ್ಕಂಪನಗಳು ಸಂಭವಿಸಿದ್ದು ಜನತೆ ಗಾಭರಿಗೊಂಡಿದ್ದಾರೆ. ಈ ಮಧ್ಯೆ ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜ್ಯೂನಿಯರ್, ನಾಶ-ನಷ್ಟವನ್ನು ಪರಿಶೀಲಿಸಿದರು ಎಂದು ವರದಿಯಾಗಿದೆ. ಬುಧವಾರ ಫಿಲಿಪ್ಪೀನ್ಸ್ನ ಅಧಿಕ ಜನಸಂಖ್ಯೆಯ ಅಬ್ರಾ ಪ್ರಾಂತಕ್ಕೆ ಅಪ್ಪಳಿಸಿದ, ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಟ 5 ಮಂದಿ ಮೃತಪಟ್ಟಿದ್ದು 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹಲವೆಡೆ ಭೂಕುಸಿತ ಸಂಭವಿಸಿದ್ದು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರದ ಬಳಿಕ ಪ್ರತೀ 15-20 ನಿಮಿಷಕ್ಕೆ ಪಶ್ಚಾತ್ ಕಂಪನ ಸಂಭವಿಸುತ್ತಿದ್ದು ಜನತೆ ಆತಂಕಗೊಂಡಿದ್ದಾರೆ . ಬಹುತೇಕ ಕುಟುಂಬಗಳ ಸದಸ್ಯರು ಬುಧವಾರ ರಾತ್ರಿಯಿಡೀ ಮನೆಯಿಂದ ಹೊರಗಡೆ ತೆರೆದ ಬಯಲಿನಲ್ಲಿ ಮಲಗಿದ್ದಾರೆ. ಹಲವರು ಸ್ಥಳೀಯಾಡಳಿತ ವ್ಯವಸ್ಥೆ ಮಾಡಿದ ತಾತ್ಕಾಲಿಕ ಶಿಬಿರಗಳಲ್ಲಿ ನೆಲೆಸಿದ್ದಾರೆ. ಮನೆಗೆ ಹಿಂತಿರುಗುವ ಮುನ್ನ, ಮನೆಯಿದ್ದ ಸ್ಥಳಕ್ಕೆ ಹೋಗಿ ಪರಿಶೀಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
800ಕ್ಕೂ ಅಧಿಕ ಪಶ್ಚಾತ್ಕಂಪನ ಸಂಭವಿಸಿದ್ದು ಇದರಲ್ಲಿ 24 ಕಂಪನಗಳು ತೀವ್ರ ಸ್ವರೂಪದ್ದು ಎಂದು ಸ್ಥಳೀಯ ಭೂಕಂಪನಶಾಸ್ತ್ರ ಸಂಸ್ಥೆ ಹೇಳಿದೆ. ಆದರೆ ಅಬ್ರಾದಲ್ಲಿ ಸಂಭವಿಸಿರುವ ಭೂಕಂಪದ ಪ್ರಮಾಣಕ್ಕೆ ಹೋಲಿಸಿದರೆ ಆಗಿರುವ ನಾಶ ನಷ್ಟದ ಪ್ರಮಾಣ ಹೆಚ್ಚೇನಲ್ಲ. ಈ ಪ್ರಾಂತದ ಜನಜೀವನ ಈಗ ಕ್ರಮೇಣ ಸಹಜಸ್ಥಿತಿಗೆ ಮರಳುತ್ತಿದೆ ಎಂದು ಪೊಲೀಸ್ ಮುಖ್ಯಸ್ಥ ಕರ್ನಲ್ ಮ್ಯಾಲಿ ಕ್ಯುಲಾರನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.







