ಹಾವೇರಿಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿಗೆ ಎನ್‍ಎಂಸಿ ಅನುಮತಿ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಜು.28: ಹಾವೇರಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮುಂಬರುವ 2022-23ನೇ ಶೈಕ್ಷಣಿಕ ಸಾಲಿನಿಂದ 150 ಎಂಬಿಬಿಎಸ್ ಸೀಟುಗಳೊಂದಿಗೆ ಪ್ರವೇಶಾತಿ ಆರಂಭಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‍ಎಂಸಿ) ಅನುಮತಿ ನೀಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಹಾವೇರಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಾಗೂ ಈ ಯೋಜನೆಯನ್ನು ಪೂರ್ಣಗೊಳಿಸಲು ಸಂಪೂರ್ಣ ಬೆಂಬಲ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ತೃತೀಯ ಹಂತದ ಚಿಕಿತ್ಸೆಗೆ ಹುಬ್ಬಳ್ಳಿ-ಧಾರವಾಡದ ಮೇಲೆ ಅವಲಂಬಿತರಾಗಬೇಕಿದ್ದ ಹಾವೇರಿ ಜಿಲ್ಲೆಯ ಜನತೆಗೆ ಈ ಸರಕಾರಿ ವೈದ್ಯಕೀಯ ಕಾಲೇಜಿನಿಂದ ತಮ್ಮ ಸಮೀಪದಲ್ಲೇ ಉತ್ಕೃಷ್ಟ ತೃತೀಯ ಹಂತದ ವೈದ್ಯಕೀಯ ಸೇವೆ ಸಿಗಲಿದೆ. ವೈದ್ಯರಾಗುವ ಕನಸು ಹೊತ್ತಿರುವ ನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 150 ಅಧಿಕ ಎಂಬಿಬಿಎಸ್ ಸೀಟುಗಳು ಲಭ್ಯವಾಗಲಿದೆ ಎಂದು ಸುಧಾಕರ್ ತಿಳಿಸಿದ್ದಾರೆ.





