ಕಾಡಾನೆಗಳ ದಾಳಿ: ರೈಲ್ವೆ ಕಂಬಿಯ ಬೇಲಿಗೆ ಹಾನಿ

ಮಡಿಕೇರಿ ಜು.28 : ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕಾವೇರಿ ನದಿ ಬಳಿ ಅಳವಡಿಸಿರುವ ರೈಲ್ವೆ ಕಂಬಿಯ ಬೇಲಿಯನ್ನು ಸಂಪೂರ್ಣವಾಗಿ ಜಖಂಗೊಳಿಸಿರುವ ಕಾಡಾನೆಗಳು ತೋಟಗಳಲ್ಲಿ ಬೀಡು ಬಿಟ್ಟಿವೆ.
ಅರಣ್ಯ ಪ್ರದೇಶದಿಂದ ನದಿಯ ಮೂಲಕ ಬಂದು ಬೇಲಿ ದಾಟಿ ಹಿಂಡು ಹಿಂಡಾಗಿ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡುತ್ತಿವೆ. ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಮಹಾಮಳೆಯ ಹಾನಿ ನಡುವೆ ಕಾಡಾನೆಗಳ ಉಪಟಳದಿಂದ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.
ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಅಮ್ಮಂಗಲದಿಂದ ನೆಲ್ಯಹುದಿಕೇರಿ ಗ್ರಾ.ಪಂ ಯ ಬರಡಿ ಗ್ರಾಮದ ವರೆಗೆ ಕಾಡಾನೆ ಹಾವಳಿ ತಡೆಗೆ ರೈಲು ಕಂಬಿಗಳ ಬೇಲಿಯನ್ನು ನಿರ್ಮಿಸಲಾಗಿದೆ. ಆದರೆ ಅವೈಜ್ಞಾನಿಕ ಬೇಲಿ ಕಾಡಾನೆಗಳ ದಾಳಿಯಿಂದ ಹಾನಿಗೀಡಾಗಿದೆ.
ಸುಮಾರು 9 ಕಿ.ಮೀ ದೂರದ ಬೇಲಿ ಕಾಮಗಾರಿಗೆ 7 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಬೇಲಿಗೆ ಕೇವಲ ಎರಡು ಕಂಬಿಗಳನ್ನು ಅಳವಡಿಸಲಾಗಿದೆ. ನಿರಂತರ ಮಳೆಯಿಂದ ಮಣ್ಣು ಮೆದುವಾಗಿದ್ದು, ಬೇಲಿ ಸುಲಭವಾಗಿ ಕಿತ್ತು ಬರುತ್ತಿದೆ. ಕನಿಷ್ಠ ಮೂರು ಕಂಬಿಗಳನ್ನು ಅಡ್ಡಲಾಗಿ ಅಳವಡಿಸಿದ್ದರೆ ಆನೆಗಳ ನುಸುಳುವಿಕೆಯನ್ನು ನಿಯಂತ್ರಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿರುವ ಗ್ರಾಮಸ್ಥರು ತಕ್ಷಣ ಬೇಲಿಯನ್ನು ಬಲಪಡಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು ಮತ್ತು ಬೆಳೆ ನಷ್ಟ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.








