ಮಧ್ಯಪ್ರದೇಶ: ಬುಡಕಟ್ಟು ಸಮದಾಯದ ಮೂವರು ಸಹೋದರಿಯರ ಮೃತದೇಹ ಪತ್ತೆ

ಭೋಪಾಲ, ಜು. 28: ಮಧ್ಯಪ್ರದೇಶದ ಖಾಂಡ್ವಾದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಮೂವರು ಸಹೋದರಿಯರ ಮೃತದೇಹಗಳು ಜುಲೈ 26ರಂದು ಪತ್ತೆಯಾಗಿವೆ.
ಮಾಹಿತಿ ತಿಳಿದ ಬಳಿಕ ಪೊಲೀಸರು ಘಟನೆ ನಡೆದ ಗೋಟಾಘಾಟ್ ಗ್ರಾಮಕ್ಕೆ ಧಾವಿಸಿದ್ದಾರೆ. ತರುವಾಯ ಮೂವರ ಸಹೋದರಿಯರನ್ನು ಸೋನು, ಸಾವಿತ್ರಿ ಹಾಗೂ ಲಲಿತಾ ಎಂದು ಗುರುತಿಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ಪ್ರಕರಣ ಹತ್ಯೆಯೋ ಆತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.
ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜವಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಟಾಘಾಟ್ ಗ್ರಾಮದಿಂದ ರಾತ್ರಿ ಸುಮಾರು 11 ಗಂಟೆಗೆ ನಾವು ಮಾಹಿತಿ ಸ್ವೀಕರಿಸಿದ್ದೆವು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡು ಬಂದಿದೆ. ಮೃತರ ಕುಟುಂಬ ಯಾವುದೇ ಸಂಶಯ ವ್ಯಕ್ತಪಡಿಸಿಲ್ಲ ಅಥವಾ ಯಾರೊಬ್ಬರ ಬಗ್ಗೆಯೂ ಆರೋಪ ಮಾಡಿಲ್ಲ ಎಂದು ಪೊಲೀಸ್ ಅಧೀಕ್ಷಕ (ಎಸ್‌ಪಿ) ವಿವೇಕ್ ಸಿಂಗ್ ಹೇಳಿದ್ದಾರೆ.
ಈ ಸಹೋದರಿಯರಿಗೆ ಆಂತರಿಕ ಸಮಸ್ಯೆಗಳು ಇದ್ದಿರಬಹುದು. ಆದುದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ, ಮೃತದೇಹದೊಂದಿಗೆ ಯಾವುದೇ ಸುಸೈಡ್ ನೋಟ್ ಪತ್ತೆಯಾಗಿಲ್ಲ. ಮೃತಪಟ್ಟವರಲ್ಲಿ ಸಾವಿತ್ರಿಗೆ ಮಾತ್ರ ವಿವಾಹವಾಗಿದೆ. ಅವರ ಕುಟುಂಬದಲ್ಲಿ ನಾಲ್ವರು ಸಹೋದರಿಯರು, ಮೂವರು ಸಹೋದರರು ಹಾಗೂ ತಾಯಿ ಇದ್ದರು ಎಂದು ಅವರು ಹೇಳಿದ್ದಾರೆ.







