ಸುರತ್ಕಲ್: ಮಂಗಳಪೇಟೆ ಮಸೀದಿ ವಠಾರದಲ್ಲಿ ಫಾಝಿಲ್ ಅಂತ್ಯ ಸಂಸ್ಕಾರ

ಮಂಗಳೂರು, ಜು.29: ಕಳೆದ ರಾತ್ರಿ ಸುರತ್ಕಲ್ ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಂಗಳಪೇಟೆಯ ಯುವಕ ಮುಹಮ್ಮದ್ ಫಾಝಿಲ್(23) ಅವರ ಅಂತ್ಯ ಸಂಸ್ಕಾರವು ಮನೆ ಸಮೀಪದ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಶುಕ್ರವಾರ ಬೆಳಗ್ಗೆ ನೆರವೇರಿತು.
ಸಾವಿರಾರು ಜನರ ಸಮ್ಮುಖದಲ್ಲಿ ಶಾಂತಿಯುತವಾಗಿ ಅಂತಿಮ ಸಂಸ್ಕಾರದ ವಿಧಿವಿಧಾನಗಳು ನೆರವೇರಿತು.
ಇಂದು ಬೆಳಗ್ಗೆ ಮೃತದೇಹವನ್ನು ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಮಂಗಳಪೇಟೆಯಲ್ಲಿರುವ ಫಾಝಿಲ್ ಮನೆಗೆ ತರಲಾಯಿತು. ಬಳಿಕ ಅಲ್ಲಿಂದ ಮೃತದೇಹವನ್ನು ಮಂಗಳಪೇಟೆ ಮುಹಿಯುದ್ದೀನ್ ಮಸೀದಿಗೆ ಕೊಂಡೊಯ್ಯಲಾಯಿತು. ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಾವಿರಾರು ಮಂದಿ ಮಸೀದಿ ವಠಾರದಲ್ಲಿ ಜಮಾಯಿಸಿ ಅಂತಿಮ ದರ್ಶನ ಪಡೆದರು. ಮಯ್ಯಿತ್ ನಮಾಝ್ ಬಳಿಕ ಮಸೀದಿ ವಠಾರದಲ್ಲಿ ದಫನ ಕಾರ್ಯ ನೆರವೇರಿತು. ಬಳಿಕ ನೆರೆದಿದ್ದ ಸಾವಿರಾರು ಮಂದಿ ಸ್ಥಳದಿಂದ ತೆರಳಿದರು.
ಮಸೀದಿ ವಠಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕಳೆದ ರಾತ್ರಿ ಮುಹಮ್ಮದ್ ಫಾಝಿಲ್ ಅವರು ಸುರತ್ಕಲ್ ನ ಮೂಡ ಮಾರುಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನನ್ನು ಭೇಟಿ ಮಾಡಿ ಅಂಗಡಿಯಿಂದ ಹೊರಬರುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಅವರನ್ನು ಕೊಲೆಗೈದಿದ್ದಾರೆ.