ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದೇ ಮೊದಲ ಆದ್ಯತೆ; ಉಡುಪಿ ತಾಪಂ ಸಭೆಯಲ್ಲಿ ಅಕ್ಷರ ದಾಸೋಹ ಅಧಿಕಾರಿ ವಿವೇಕ್ ಗಾಂವ್ಕರ್

ಉಡುಪಿ, ಜು.29: ಸರಕಾರಿ ಹಾಗೂ ಅನುದಾನಿತ ಶಾಲೆಗಳ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡುವ ಯೋಜನೆ ಜಾರಿಯಲ್ಲಿದ್ದು, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಮತ್ತು ಇದು ಎರಡೂ ಸೇವಿಸದವರಿಗೆ ಚಿಕ್ಕಿ ನೀಡಲಾಗುವುದು. ಮಕ್ಕಳಿಗೆ ಮೊಟ್ಟೆ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆಂದು ಅಕ್ಷರ ದಾಸೋಹ ಅಧಿಕಾರಿ ವಿವೇಕ್ ಗಾಂವ್ಕರ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿಯಾಗಿರುವ ಉಡುಪಿ ಜಿಪಂ ಯೋಜನಾ ನಿರ್ದೇಶಕ ಬಾಬು ಎಂ. ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತಿದ್ದರು. ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲೂಕಿನ ಒಟ್ಟು ೩೩೬೫೦ ಮಕ್ಕಳು ಈ ಯೋಜನೆ ಅನ್ವಯವಾಗುತ್ತದೆ. ಈ ಹಿಂದೆ ಮಕ್ಕಳಿಗೆ ಊಟ, ಹಾಲು ನೀಡಿದರೂ ಪೌಷ್ಠಿಕತೆ ಹೆಚ್ಚಾಗದ ಕಾರಣಕ್ಕೆ ಇದೀಗ ಮೊಟ್ಟೆ ನೀಡಲಾಗುತ್ತದೆ. ಅಂಗನವಾಡಿಯಲ್ಲಿ ಶೇ.೮೦ರಷ್ಟು ಮಕ್ಕಳಿಗೆ ಮೊಟ್ಟೆಯೇ ನೀಡಲಾಗುತ್ತಿದೆ. ಒಂದು ಮೊಟ್ಟೆ ಖರೀದಿಸಿ, ಬೇಯಿಸಿ, ಮಕ್ಕಳಿಗೆ ನೀಡಲು ಆರು ರೂ. ಹಣ ನಿಗದಿಪಡಿಸಲಾಗಿದೆ. ಇದನ್ನು ಆಯಾ ಶಾಲೆಯ ಅಭಿವೃದ್ಧಿ ಸಮಿತಿಯವರೇ ನೀಡುತ್ತಾರೆ ಎಂದರು.
೩೭ ಮಕ್ಕಳು ಡ್ರಾಪ್ಔಟ್: ಉಡುಪಿ ತಾಲೂಕಿನಲ್ಲಿ ಈ ವರ್ಷ ಒಟ್ಟು ೩೭ ಮಕ್ಕಳು ಶಾಲೆ ತೊರೆದಿದ್ದಾರೆ. ಅದರಲ್ಲಿ 13 ಮಂದಿ ಉತ್ತರ ಕರ್ನಾಟಕದ ಮಕ್ಕಳಿದ್ದಾರೆ ಎಂದು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಸಭೆಗೆ ಮಾಹಿತಿ ನೀಡಿದರು.
ಈ ಮಕ್ಕಳನ್ನು ವಾಪಾಸ್ಸು ಶಾಲೆಗೆ ಕರೆ ತರುವ ಪ್ರಯತ್ನ ನಡೆಸಲಾಗುತ್ತಿದೆ. ಈ ವರ್ಷ ಹಾಸ್ಟೆಲ್ನಲ್ಲಿದ್ದ ೭-೮ ಮಂದಿ ಉತ್ತರ ಕರ್ನಾಟಕ ವಿದ್ಯಾರ್ಥಿಗಳು ಹೋದವರು ವಾಪಾಸ್ಸು ಬಂದಿಲ್ಲ. ಅವರಿಗೆ ಟಿಸಿ ಕಳುಹಿಸಿಕೊಡ ಬೇಕು ಅಥವಾ ಕೂಡಲೇ ವಾಪಾಸ್ಸು ಕರೆಸಬೇಕು ಎಂದು ಸೂಚಿಸಲಾಗಿದೆ.
ಅದೇ ರೀತಿ ತಾಲೂಕಿನ ಐದು ಮಂದಿ ಕೊರಗ ವಿದ್ಯಾರ್ಥಿಗಳು ಕೂಡ ಶಾಲೆ ಯಿಂದ ಹೊರಗೆ ಉಳಿದಿದ್ದಾರೆ. ಆ ಬಗ್ಗೆ ಹೆಚ್ಚಿನ ಗಮನ ಕೊಡಲಾಗುತ್ತಿದೆ ಎಂದರು. ಈ ಮಕ್ಕಳನ್ನು ವಾಪಾಸ್ಸು ಕರೆ ತರಲು ಹಾಜರಾತಿ ಅಧಿಕಾರಿಗಳು ಮಾತ್ರವಲ್ಲದೆ ಸ್ಥಳೀಯ ಜನಪ್ರತಿನಿಧಿಗಳನ್ನು ಕೂಡ ಅದಲ್ಲಿ ಭಾಗಿಯಾನ್ನಾಗಿಸಿ ಕೊಳ್ಳಬೇಕು ಎಂದು ಆಡಳಿತಾಧಿಕಾರಿ ಬಾಬು ಎಂ. ಸೂಚಿಸಿದರು.
ಅಪಾರ ಭತ್ತದ ಕೃಷಿ ಹಾನಿ: ಉಡುಪಿ ತಾಲೂಕಿನಾದ್ಯಂತ ಈ ಬಾರಿ ೪೩೧.೭ ಮಿ.ಮೀ. ಹೆಚ್ಚುವರಿ ಮಳೆಯಾಗಿದ್ದು, ಭತ್ತದ ಕೃಷಿಗೆ ಅಪಾರ ಹಾನಿಯಾಗಿದೆ. ಕೋಟ ಹೋಬಳಿ ವ್ಯಾಪ್ತಿಯಲ್ಲಿ ೨೩೭ ಹೆಕ್ಟೇರ್ ಭತ್ತ ಹಾನಿಯಾಗಿದ್ದು, ಪರಿಹಾರ ಕೋರಿ ೬೨೦ ರೈತರು ಅರ್ಜಿ ಸಲ್ಲಿಸಿದ್ದಾರೆ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಅದೇ ರೀತಿ ಬ್ರಹ್ಮಾವರದಲ್ಲಿ ೧೮.೮೩ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ೩೫ ಕೃಷಿಕರು ಅರ್ಜಿ ಸಲ್ಲಿಸಿದ್ದಾರೆ. ಉಡುಪಿ ಕೊರಂಗ್ರಪಾಡಿಯಲ್ಲಿ ೧.೫ ಹೆಕ್ಟೇರ್ ಭತ್ತದ ಕೃಷಿ ಹಾನಿಯಾಗಿದೆ. ಕಾಪು ವ್ಯಾಪ್ತಿಯಲ್ಲಿ ೨೮.೩ ಹೆಕ್ಟೇರ್ ಹಾನಿ ಯಾಗಿದ್ದು, ೫೫ ಮಂದಿ ರೈತರು ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ಸ್ಥಳೀಯ ಗ್ರಾಪಂ ಗ್ರಾಮ ಲೆಕ್ಕಿಗರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ವರದಿ ಮಾಡಿದ್ದಾರೆ. ಅದನ್ನು ಆಯಾ ತಾಲೂಕು ಕಚೇರಿಗಳಿಗೆ ಸಲ್ಲಿಸಿದ್ದಾರೆ. ಅಲ್ಲಿ ಪರಿಹಾರ ನೀಡಲಾ ಗುತ್ತದೆ. ಕಳೆದ ವರ್ಷ ಒಂದು ಹೆಕ್ಟೇರ್(ಎರಡೂವರೆ ಎಕರೆ)ಗೆ ೬೮೦೦ರೂ. ಪರಿಹಾರ ನೀಡಿದ್ದರೆ, ಈ ವರ್ಷ ಅದನ್ನು ದುಪ್ಪಟ್ಟು ಅಂದರೆ ೧೩೬೦೦ರೂ.ಗೆ ಏರಿಕೆ ಮಾಡ ಲಾಗಿದೆ ಎಂದು ಅವರು ತಿಳಿಸಿದರು.
ಸಾಂತ್ವನ ಕೇಂದ್ರ ಪುನಾರಂಭ: ಕಳೆದ ಒಂದೂವರೆ ವರ್ಷಗಳಿಂದ ಸ್ಥಗಿತ ಗೊಂಡಿದ್ದ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸಾಂತ್ವನ ಕೇಂದ್ರ ವನ್ನು ಪುನಾರಂಭಿಸಲಾಗಿದೆ. ನಮ್ಮಲ್ಲಿ ಮಾತೃ ಪೂರ್ಣ ಯೋಜನೆ ಶೇ.೨೫ರಷ್ಟು ಮಾತ್ರ ಸಾಧನೆ ಮಾಡಲಾಗಿದೆ. ಮಾನವ ಕಳ್ಳ ಸಾಗಾಣಿಕೆ ತಡೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಪ್ರತಿ ಗ್ರಾಪಂಗಳಲ್ಲಿ ನಡೆಸಲು ಉದ್ದೇಶಿಸ ಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವೀಣಾ ತಿಳಿಸಿದರು.
ಎಲ್ಲರಿಗೂ ಬೂಸ್ಟರ್ ಡೋಸ್ ಕೊಡುವ ಕಾರ್ಯಕ್ರಮ ಆರಂಭವಾಗಿದೆ. ಎರಡನೇ ಡೋಸ್ ಪಡೆದು ಆರು ತಿಂಗಳಾದರೂ ಬೂಸ್ಟರ್ ಡೋಸ್ ಪಡೆಯಲು ಅವಕಾಶ ಇದೆ. ಕೇಂದ್ರ ಸರಕಾರ ನೇತ್ರಜ್ಯೋತಿ ಯೋಜನೆಯಡಿ ೫೦ವರ್ಷ ಮೇಲ್ಪಟ್ಟವರಿಗೆ ನೇತ್ರ ತಪಾಸಣೆ ನಡೆಸಿ ಪೊರೆ ಇದ್ದರೆ ಶಸ್ತ್ರಚಿಕಿತ್ಸೆ ನಡೆಸಿ ಉಚಿತ ಕನ್ನಡಕ್ಕ ನೀಡಲಾಗುವುದು ಎಂದು ತಾಲೂಕು ಆರೋಗ್ಯಾಧಿ ಕಾರಿ ತಿಳಿಸಿದರು.
ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕಿ ವಿಜಯಾ, ಸಹಾಯಕ ಲೆಕ್ಕಾಧಿ ಕಾರಿ ಮೆಲ್ವಿನ್ ಥೋಮಸ್ ಬಾಂಜಿ ಉಪಸ್ಥಿತರಿದ್ದರು.
ಗೈರಾದ ಅಧಿಕಾರಿಗಳ ಬಗ್ಗೆ ಸರಕಾರಕ್ಕೆ ವರದಿ
ತಾಪಂ ಸಭೆಗೆ ನಿರಂತರವಾಗಿ ಗೈರು ಹಾಜರಾದ ಅಧಿಕಾರಿಗಳ ಬಗ್ಗೆ ನೇರ ವಾಗಿ ಸರಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ತಾಪಂ ಆಡಳಿತಾಧಿಕಾರಿ ಬಾಬು ಎಂ. ತಿಳಿಸಿದರು.
ತಾಪಂ ಸಭೆಯಲ್ಲಿ ಶಿಶು ಕಲ್ಯಾಣ ಯೋಜನಾಧಿಕಾರಿ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಗತ್ಯವಾಗಿ ಇರಬೇಕು. ಇದರಲ್ಲಿ ನಿರಂತರವಾಗಿ ಗೈರು ಹಾಜ ರಾಗುತ್ತಿರುವ ಅಧಿಕಾರಿಗಳ ವಿರುದ್ಧ ಆಯಾ ಇಲಾಖೆ ಹಾಗೂ ಸರಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ಅವರು ಹೇಳಿದರು.