ಮೂರು ಕೊಲೆಗಳಿಗೂ ನೇರ ಹೊಣೆ ಬಿಜೆಪಿ: ಹರೀಶ್ ಕುಮಾರ್ ಆರೋಪ

ಮಂಗಳೂರು, ಜು. 29: ಜಿಲ್ಲೆಯಲ್ಲಿ ಕಳೆದ 10 ದಿನಗಳ ಅವಧಿಯಲ್ಲಿ ನಡೆದ ಮೂರು ಕೊಲೆಗಳಿಗೂ ನೇರ ಕಾರಣ ಬಿಜೆಪಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎಸ್‌ಡಿಪಿಐನ ನಾಯಕರು ಮತ್ತು ಸಂಘ ಪರಿವಾರದ ನಾಯಕರ ಕೋಮುದ್ವೇಷ ಮತ್ತು ಪ್ರಚೋದನಕಾರಿ ಭಾಷಣಗಳಿಂದ ಇಂತಹ ಘಟನೆಗಳು ನಡೆಯುತ್ತವೆ ಎಂದರು.
ಜಾತ್ಯತೀತ ಮತಗಳನ್ನು ವಿಭಜಿಸುವ ಸಲುವಾಗಿಯೇ ಬಿಜೆಪಿಯು ಎಸ್‌ಡಿಪಿಐ ಹಾಗೂ ಓವೈಸಿಯ ಪಕ್ಷವನ್ನು ತನ್ನ ಭ್ರಷ್ಟಾಚಾರದ ಹಣದಿಂದ ಸಾಕುತ್ತಿದೆ. ಹಿಂದೂಗಳ ರಕ್ಷಣೆ ಮಾಡುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿಯ ಆಡಳಿತದಲ್ಲಿ ಇದೀಗ ಅದೇ ಸಂಘಟನೆಗಳಿಂದ ಹಿಂದೂಗಳ ಕೊಲೆಯಾಗುತ್ತಿರುವುದು ಮಾಧ್ಯಮದಿಂದಲೇ ತಿಳಿದುಬರುತ್ತಿದೆ. ತಾಕತ್ತಿದ್ದರೆ ಇವರು ಎಸ್‌ಡಿಪಿಐ ಬ್ಯಾನ್ ಮಾಡಲಿ ಎಂದು ಸವಾಲೆಸೆದರು.
ಕಾಂಗ್ರೆಸ್ ಸರಕಾರವಿದ್ದಾಗ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆಯವರು ಎಸ್‌ಡಿಪಿಐ ಬ್ಯಾನ್ ಮಾಡುವಂತೆ ಬೀದಿಗಿಳಿದು ಆಗ್ರಹಿಸಿದ್ದರು. ಈಗ ಅವರದ್ದೇ ಸರಕಾರವಿರುವಾಗ ಇವರಿಗೆ ಧಮ್ ಇಲ್ಲ. ಆ ಸಂಘಟನೆ ಬಂದ್ ಮಾಡಿದರೆ ಇವರ ಬೇಳೆ ಬೇಯಲು ಸಾಧ್ಯವಿಲ್ಲ. ಸಂಸತ್ತಿನಲ್ಲಿ ಕೋಮು ಪ್ರಚೋದಿತ ಹೇಳಿಕೆ ನೀಡುವ ಓವೈಸಿಯನ್ನು ಬಂಧಿಸಲು 56 ಇಂಚಿನ ಎದೆಗೆ ಧಮ್ ಇಲ್ಲವೇ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ಹಣದಿಂದ ಶಾಸಕರನ್ನು ಖರೀದಿಸಿ ಅನೈತಿಕ ಸರಕಾರ ರಚನೆ ಮಾಡಿರುವ ಬಿಜೆಪಿಯ ಅಸಂವಿಧಾನಿಕ ನಿಲುವುನಿಂದ ಇಂದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಂದೆಡೆ ಜನರಿಗೆ ಬದುಕಲು ಆಗುತ್ತಿಲ್ಲ. ರಕ್ಷಣೆಯೂ ಇಲ್ಲ ಎಂದು ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ತೇಜಸ್ವಿ ಸೂರ್ಯರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಹರೀಶ್ ಕುಮಾರ್, ಇವರು ಕಲ್ಲು ಹೊಡೆದು ಗಲಾಟೆ ಮಾಡಿದವರಲ್ಲದೆ, ಕೋಮು ಗಲಭೆ ಸೃಷ್ಟಿ ಮಾಡಿದವರೇ. ಅವರ ಚರಿತ್ರೆ ಗೊತ್ತಿದೆ. ಈಗ ಸಾರ್ವಜನಿಕವಾಗಿ ಅದನ್ನು ಹೇಳುತ್ತಿದ್ದಾರಷ್ಟೆ. ದೇಶದ ಜನರ ಬಗ್ಗೆ ಇವರಿಗೆ ಕನಿಕರ ಇರುತ್ತಿದ್ದರೆ ಇಂತಹ ಮಾತುಗಳನ್ನಾಡುತ್ತಿರಲಿಲ್ಲ ಎಂದು ಹೇಳಿದರು.
ಸಂವಿಧಾನದ ಆಶಯದಡಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ದ್ವೇಷ ಇಲ್ಲದೆ ಕಾರ್ಯ ನಿರ್ವಹಿಸಬೇಕು. ಮತಾಂಧರಿಂದ ಕೊಲೆಯಾದ ಹರ್ಷ, ಪ್ರವೀಣ್‌ರವರ ಮನೆಗಳಿಗೆ ಭೇಟಿ ನೀಡಿರುವುದು ಸ್ವಾಗತ, ಸರಕಾರದ ಜವಾಬ್ಧಾರಿ ಕೂಡಾ. ಆದರೆ ಮಸೂದ್ ಹತ್ಯೆಯೂ ಅಸ್ವಾಭಾವಿಕ. ಆತನ ಕುಟುಂಬಕ್ಕೂ ನಷ್ಟ ವಾಗಿದೆ. ಆತನೂ ಈ ದೇಶದ, ರಾಜ್ಯದ ಪ್ರಜೆ. ಆತನ ಕುಟುಂಬಕ್ಕೂ ಸಾಂತ್ವಾನ ಹೇಳುವ, ಪರಿಹಾರ ನೀಡುವ ಜವಾಬ್ಧಾರಿ ಸರಕಾರದ್ದು. ಆದರೆ ಸರಕಾರ ಇತ್ತೀಚೆಗೆ ಕೊಲೆಯಾದ ದಲಿತ ದಿನೇಶ್, ಮಸೂದ್ ಅಥವಾ ಫಾಝಿಲ್ ಕುಟುಂಬದ ಬಗ್ಗೆ ಅನುಕಂಪ ತೋರಿಸುತ್ತಿಲ್ಲ. ರಾಜ್ಯದಲ್ಲಿರುವುದು ಕೊಲೆಗಡುಕ, ನಿಷ್ಕ್ರಿಯ, ಬೇಜವಾಬ್ದಾರಿ ಹಾಗೂ ದುರ್ಬಲ ಸರಕಾರ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಜಿಲ್ಲೆಗೆ ಬಂದು ಹಿಂತಿರುಗುವಾಗಲೇ, ಎಡಿಜಿಪಿ ಜಿಲ್ಲೆಯಲ್ಲಿ ಇರುವಾಗಲೇ ಇಲ್ಲಿ ಮತ್ತೊಂದು ಕೊಲೆಯಾಗುತ್ತಿದೆಯೆಂದರೆ ಇದು ಗೆರಿಲ್ಲಾ ಮಾದರಿಯ ಕೃತ್ಯ. ಜನರ ಅಸಹನೆ ಕಾನೂನು ಕೈಗೆತ್ತಿಕೊಳ್ಳಲು ಪ್ರೇರೇಪಿಸುತ್ತಿದೆ. ಸರಕಾರ, ಇಲಾಖೆಗಳ ಭಯ ಇಲ್ಲವಾಗಿದೆ. ಸರಕಾರ ಮಾಡುತ್ತಿರುವ ತಾರತಮ್ಯ ತಪ್ಪು. ಕೊಲೆ ಆಗುತ್ತಿರುವುದು ಬಡ ಮತ್ತು ಅಮಾಯಕರದ್ದು. ಹಿಂದುತ್ವದ ಅಮಲಿನಲ್ಲಿದ್ದ ಯುವಕರಿಗೆ 25 ವರ್ಷದ ನಂತರ ಈ ಎಲ್ಲಾ ಸಂಗತಿ ಅರ್ಥವಾಗುತ್ತಿರುವುದು ಸಮಾಧಾನದ ಸಂಗತಿ ಎಂದವರು ಹೇಳಿದರು.
ಸರಕಾರ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿರುವುದು ಕೊಲೆಯಾದ ಪ್ರವೀಣ್ ಮೇಲಿನ ಪ್ರೀತಿಯಿಂದ ಅಲ್ಲ. ಬದಲಾಗಿ ಕಾರ್ಯಕರ್ತರು ರಾಜ್ಯಾಧ್ಯಕ್ಷರು ಹಾಗೂ ಉಸ್ತುವಾರಿ ಸಚಿವರಿಗೆ ನೀಡಿದ ಬಿಸಿಯಿಂದಾಗಿ ವಿಚಲಿತರಾಗಿ ಮಾಡಿರುವುದು ಎಂದು ಹರೀಶ್ ಕುಮಾರ್ ಹೇಳಿದರು.
ಗೋಷ್ಠಿಯಲ್ಲಿ ಮುಖಂಡರಾದ ಕವಿತಾ ಸನಿಲ್, ಪ್ರಕಾಶ್ ಸಾಲ್ಯಾನ್, ಸಲೀಂ, ಟಿ.ಕೆ. ಸುಧೀರ್, ನೀರಜ್ ಪಾಲ್, ಶುಭೋದಯ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
"ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾಗಿ ತಿಳಿಸಿದ್ದಾರೆ. ಈ ನಡುವೆ ಕೇಂದ್ರ ಸಚಿವರೊಬ್ಬರು ಪ್ರವೀಣ್ ಹಂತಕರು ಕೇರಳದವರು. ಕೇರಳದ ಗಾಡಿಯಲ್ಲಿ ಬಂದಿದ್ದಾರೆ. ಕೇರಳ ಸರಕಾರ ತನಿಖೆಗೆ ಸಹಕಾರ ನೀಡಬೇಕು ಎಂದು ಇಂದು ಹೇಳಿದ್ದಾರೆ. ಹಾಗಿದ್ದರೆ ನಿನ್ನೆ ಬಂಧಿಸಲ್ಪಟ್ಟವರು ಫಿಕ್ಸ್ ಮಾಡಿರುವುದೇ? ಈ ಬಗ್ಗೆ ಸರಕಾರ ತಿಳಿಸಬೇಕು. ಘಟನೆಗೆ ಸಂಬಂಧಿಸಿ ಸೂಕ್ತ ತನಿಖೆಯಾಗಬೇಕು. ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವಂತಾಗಬೇಕು. ಕಳೆದ 10 ವರ್ಷಗಳಿಂದ ಆಗಿರುವ ಕೊಲೆ ಪ್ರಕರಣಗಳನ್ನು ವಿಶೇಷ ನ್ಯಾಯಾಲಯದ ಮೂಲಕ ವಿಚಾರಣೆಗೊಳಪಡಿಸಿ ನ್ಯಾಯ ಒದಗಿಸಬೇಕು. ಮೃತರ ಕಟುಂಬಗಳಿಗೆ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹರೀಶ್ ಕುಮಾರ್ ಆಗ್ರಹಿಸಿದರು.
ವ್ಯಾಪಾರ ಮುಚ್ಚಿಸದಿರಲು ಮನವಿ
ದ.ಕ. ಜಿಲ್ಲೆಯಲ್ಲಿ ನಡೆದಂತಹ ಕೊಲೆಗಳ ಸಂದರ್ಭ ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆಯಿಂದ ಮುಚ್ಚುವಂತೆ ಜಿಲ್ಲಾಡಳಿತ ಆದೇಶಿಸಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅಭಿಪ್ರಾಯಿಸಿದ್ದಾರೆ.
ಈಗಾಗಲೇ ಕೊರೋನದಿಂದ ವ್ಯಾಪಾರಸ್ಥರು, ಸಾರ್ವಜನಿಕರು ಕಂಗಾಲಾಗಿದ್ದಾರೆ. ಕೊಲೆ ನಡೆದಿರುವುದು ಸರಕಾರ ಮತ್ತು ಗುಪ್ತಚರ ಇಲಾಖೆಯ ವೈಫಲ್ಯವೇ ಹೊರತು ವ್ಯಾಪಾರಸ್ಥರು ಕಾರಣರಲ್ಲ. ಈ ಕಠಿಣ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಕಣ್ಗಾವಲಿಟ್ಟು ಸಾರ್ವಜನಿಕರ ರಕ್ಷಣೆ ಮಾಡುವ ಜವಾಬ್ಧಾರಿ ಸರಕಾರದ್ದು, ಅಂಗಡಿ ಮುಂಗಟ್ಟು ಮುಚ್ಚಿಸುವುದಲ್ಲ. ಜಿಲ್ಲಾಡಳಿತ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಅವರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದಾರೆ.