ಉಡುಪಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ: ವಾಹನಗಳ ತಪಾಸಣೆ

ಉಡುಪಿ, ಜು.29: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಇಂದು ಸಂಜೆಯಿಂದ ರಾತ್ರಿಯವರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ದನ್ ನೇತೃತ್ವದಲ್ಲಿ ಪೊಲೀಸರು ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ವಾಹನಗಳ ತಪಾಸಣೆ ಕಾರ್ಯ ನಡೆಸಿದರು.
ಜಿಲ್ಲೆಯಲ್ಲಿರುವ 12 ಚೆಕ್ಪೋಸ್ಟ್, 60 ಪಿಕೆಟಿಂಗ್ ಪಾಯಿಂಟ್ಗಳಲ್ಲಿ ಎಲ್ಲ ವಾಹನಗಳ ತಪಾಸಣೆ ನಡೆಸಲಾಯಿತು. ವಾಹನಗಳಲ್ಲಿ ಮಾರಕಾಯುಧಗಳ ಸಾಗಾಟ, ಅನುಮಾನಾಸ್ಪದ ವ್ಯಕ್ತಿಗಳ ಕುರಿತು ಪರಿಶೀಲನೆ ನಡೆಸಲಾಯಿತು. ಸಂಜೆ 4ಗಂಟೆಗೆ ಆರಂಭಗೊಂಡ ಈ ಕಾರ್ಯಾಚರಣೆ ರಾತ್ರಿ 8ಗಂಟೆಯವರೆಗೆ ನಡೆಯಿತು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ದನ್ ಕುಂದಾಪುರ ಶಾಸ್ತ್ರೀ ಸರ್ಕಲ್, ಹೂಡೆ, ನೇಜಾರು, ಕೋಡಿ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಅದೇ ರೀತಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ ಕೂಡ ವಿವಿಧ ಕಡೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.