ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲು ಬಿಡುತ್ತಿಲ್ಲ: ಸಂಸದ ನಾಸಿರ್ ಹುಸೇನ್

ಬೆಂಗಳೂರು, ಜು.29: ಕೇಂದ್ರ ಸರಕಾರವು ಸಂಸತ್ತಿನಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಚೀನಾ ಅತಿಕ್ರಮಣ, ರಾಷ್ಟ್ರೀಯ ಭದ್ರತೆ, ಅಗ್ನಿಪಥ್ ಯೋಜನೆ, ರೂಪಾಯಿ ಮೌಲ್ಯ ಕುಸಿತ ಇದ್ಯಾವುದರ ಬಗ್ಗೆಯೂ ಧ್ವನಿ ಎತ್ತಲು ಬಿಡುತ್ತಿಲ್ಲ ಎಂದು ರಾಜ್ಯಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಸೈಯ್ಯದ್ ನಾಸಿರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರು ದಿನ ನಿತ್ಯದ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಬಾರದೆ? ಚರ್ಚೆ ಮಾಡಬಾರದೆ? ಕೇಂದ್ರ ಸರಕಾರವು ರಾಜಕೀಯ ದ್ವೇಷದಿಂದ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಮುಖಂಡರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ ಎಂದು ಕಿಡಿಗಾರಿದರು.
ಕೇಂದ್ರ ಸರಕಾರ ನಿನ್ನೆ ರಾಹುಲ್ ಗಾಂಧಿ, ಇವತ್ತು ಸೋನಿಯಾ ಗಾಂಧಿ ವಿರುದ್ಧ ರಾಜಕೀಯ ದ್ವೇಷವನ್ನು ಬಿಜೆಪಿ ಸಾಧಿಸುತ್ತಿದೆ. ಅವರಿಗೆ ಕಿರುಕುಳ ನೀಡಿ, ಬ್ಲಾಕ್‍ಮೇಲ್ ಮಾಡಿ, ದೇಶದಲ್ಲಿರುವ ಸಮಸ್ಯೆಗಳ ಬಗ್ಗೆ ಅವರು ಧ್ವನಿ ಎತ್ತದಂತೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ದೂರಿದರು.
ಮಾಧ್ಯಮದವರನ್ನು ಗುರಿಯಾಗಿಸಲಾಗುತ್ತಿದೆ. ಯುಎಪಿಎ, ದೇಶದ್ರೋಹ ಪ್ರಕರಣಗಳ ಮೂಲಕ ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸಲು ಕೊನೆಯವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಸೈಯ್ಯದ್ ನಾಸಿರ್ ಹುಸೇನ್ ಹೇಳಿದರು.







